

ಮುಳಬಾಗಿಲು: ಪ್ರಯಾಣಿಕರೇ ದೇವರು ಎಂಬ ಧ್ಯೇಯೋದ್ದೇಶ ದೊಂದಿಗೆ ಈ ಹಿಂದೆ ಸಾರಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ ಪ್ರಯಾಣಿಕರನ್ನು ರ್ನಿಲಕ್ಷಿಸುವ ಸಂಸ್ಥೆಯಾಗಿ ಕೆಎಸ್ಆರ್ಟಿಸಿ ವರ್ತನೆ ಬದಲಾಯಿಸಿಕೊಳ್ಳುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕರೊನಾ ಲಾಕ್ಡೌನ್ ಮುಂಚೆ ಇದ್ದ ಕೆಎಸ್ಆರ್ಟಿಸಿ ವ್ಯವಸ್ಥೆಗೂ ಹೀಗಿರುವ ವ್ಯವಸ್ಥೆಗೂ ವ್ಯತ್ಯಾಸವಾಗಿದ್ದು, ಜನಸೇವೆ ಎಂಬುದನ್ನು ಮರೆತಂತೆ ಕಾಣುತ್ತಿದೆ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಬರದೆ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಮುಳಬಾಗಿಲಿನಿಂದ ಕೋಲಾರ, ಬೆಂಗಳೂರಿಗೆ ಪ್ರತಿನಿತ್ಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಆದರೆ ಬೆಳಗ್ಗೆ 9 ರಿಂದ 10ರವರೆಗೂ ಕೋಲಾರ, ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ಗಳಿಲ್ಲದೆ ಖಾಸಗಿ ಬಸ್ಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ನಿತ್ಯಪರದಾಟ: ಕೆಎಸ್ಆರ್ಟಿಸಿ ಬಸ್ಪಾಸ್ ಪಡೆದು, ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ&ಕಾಲೇಜುಗಳಿಗೆ ಹೋಗಲು ಖಾಸಗಿ ಬಸ್ಗಳಲ್ಲಿ ಹಣ ನೀಡಿ ಹೋಗಬೇಕಾದ ಸ್ಥಿತಿ ನಿಮಾರ್ಣವಾಗುತ್ತಿದೆ.
ಅಲ್ಲದೆ ಕಾಂತರಾಜ ಸರ್ಕಲ್ನ ಡಿಪ್ಲೊಮಾ ಕಾಲೇಜು, ದೇವರಾಯಸಮುದ್ರದ ಐಟಿಐ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲದೆ ಆಟೋ, ಖಾಸಗಿ ಬಸ್ಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ.
ಕರೊನಾ ಲಾಕ್ಡೌನ್ ನಂತರ ಗ್ರಾಮಾಂತರ ಪ್ರದೇಶದಲ್ಲಿ ತಂಗುವ ಬಸ್ಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ 9ರಿಂದ ಕೋಲಾರದ ಸರ್ಕಾರಿ ಕಚೇರಿಗಳಿಗೆ ತೆರಳುವ ಸಿಬ್ಬಂದಿ, ನ್ಯಾಯಾಲಯಗಳಿಗೆ ಹೋಗಬೇಕಾದ ಕಕ್ಷಿದಾರರು, ವಕೀಲರ ಸಂಖ್ಯೆ ಹೆಚ್ಚಾಗಿದ್ದು, ಈ ಸಮಯಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ ಕೆಎಸ್ಆರ್ಟಿಸಿ ಪ್ರಯಾಣಿಕರ ಸೇವೆಗೆ ಮುಂದಾಗಬೇಕಿದೆ.
ಬೆಳಗ್ಗೆ 9 ರಿಂದ 10 ಗಂಟೆಯವರೆಗೂ ಹೆಚ್ಚುವರಿ ಬಸ್ಗಳನ್ನು ನಿಯೋಜನೆ ಮಾಡಿ ಪ್ರಯಾಣಿಕರ ಸೇವೆ ಸಲ್ಲಿಸಲಾಗುವುದು. - ಅನ್ಸರ್ ಪಾಷಾ ಪ್ರಭಾರ ವ್ಯವಸ್ಥಾಪಕ ಕೆಎಸ್ಆರ್ಟಿಸಿ ಘಟಕ ಮುಳಬಾಗಿಲು ಬೆಳಗ್ಗೆ 9 ರಿಂದ 10ರೊಳಗೆ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡಲು ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗುವುದು. ಗ್ರಾಮೀಣ ಪ್ರದೇಶದ ಹಾಲ್ಟ್ ಬಸ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. - ಜೈಶಾಂತ್ ಕುಮಾರ್, ಡಿಟಿಒ ಕೆಎಸ್ಆರ್ಟಿಸಿ ಕೋಲಾರ ಗ್ರಾಮೀಣ ಪ್ರದೇಶದ ಬಸ್ ವ್ಯವಸ್ಥೆ ತುಂಬಾ ಅಧ್ವಾನವಾಗಿದೆ. ಹಲವು ಬಾರಿ ಕೆಎಸ್ಆರ್ಟಿಸಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಖಾಸಗಿ ಬಸ್ ಮಾಲೀಕ ರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. - ಚಲ್ಲಪ್ಪಲ್ಲಿ ಕೃಷ್ಣಾರೆಡ್ಡಿ ರೈತ ಸೇನೆ ಜಿಲ್ಲಾಧ್ಯಕ್ಷ