

ಬಾಳೆಹೊನ್ನೂರು:ಪ್ರತಿಯೊಂದು ಕುಟುಂಬದಿಂದ ಕನಿಷ್ಠ ಒಬ್ಬರಾದರೂ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ಮುತ್ತಿನಕೊಪ್ಪದ ಕೆ.ಎಲ್.ಉಪೇಂದ್ರ ಗೌಡ ಹೇಳಿದರು.
ಸಮೀಪದ ಬನ್ನೂರಿನಲ್ಲಿ ಕೃಷಿಕ ಬಿ.ಎಸ್.ಶ್ರೀನಿವಾಸ್ ಗೌಡ ಅವರ ಮನೆಯಂಗಳದಲ್ಲಿ ಆಯೋಜಿಸಿದ್ದ ಬಾಂಧವ್ಯ ಬೆಸುಗೆ ಕೌಟುಂಬಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸೈನಿಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಸೈನಿಕನಾಗಿ ದೇಶ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಇದೀಗ ನಿವೃತ್ತರಾಗಿದ್ದರೂ ಸಹ ಅನಿವಾರ್ಯ ಸಂದರ್ಭ ಬಂದರೆ ಮತ್ತೊಮ್ಮೆ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ನಮ್ಮ ಆಚಾರ ವಿಚಾರಗಳು ಏನೇ ಇದ್ದರೂ ದೇಶ ಮೊದಲು ಎಂಬುದಕ್ಕೆ ಪ್ರತಿಯೊಬ್ಬರು ಪ್ರಥಮ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮ ಆಯೋಜಕ ಬಿ.ಎಸ್.ಶ್ರೀನಿವಾಸ್ ಗೌಡ ಮಾತನಾಡಿ, ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವುದು ಮತ್ತು ಅವರ ಸಾಧನೆಗೆ ಶ್ರೀರಕ್ಷೆಯಾಗಿ ನಿಲ್ಲುವುದು ಇತರ ಸದಸ್ಯರಿಗೆ ಹಾಗೂ ಮುಂದಿನ ಪೀಳಿಗೆಗೆ ಸಾಧನೆಗೆ ಸ್ಫೂರ್ತಿಯಾಗಲಿದೆ ಎಂದರು.
ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಎಲ್.ಉಪೇಂದ್ರ ಗೌಡ, ಸುನೀಲ್ ಗೌಡ, ಬಾರ್ ಟೆಂಡಿಂಗ್ ಕಲೆಯಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯುವ ಕಲಾವಿದ ಸಚಿನ್ ಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪ್ರವಲ್ಲಿಕ, ವೆಂಕಟೇಶ್, ಸುಮಾ ಶ್ರೀನಿವಾಸ್, ಮಾನ್ವಿಕ್ ಗೌಡ, ಚೈತನ್ಯ ವೆಂಕಿ, ಅವನಿ ತೇಜಸ್ವಿನಿ, ಬ್ರಿಜೇಶ್, ರಾಜೇಶ್, ಅಭಿಷೇಕ್ ಮತ್ತಿತರರಿದ್ದರು.