ಸೆಸ್ಕ್ ಶಾಖಾಧಿಕಾರಿಗಳ ಕಚೇರಿಗೆ ರೈತರ ಮುತ್ತಿಗೆ

30kgl6
Published on

ಕೊಳ್ಳೇಗಾಲ: ಏಳು ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ದೊಡ್ಡಿಂದುವಾಡಿ ಗ್ರಾಮದ ಸೆಸ್ಕ್ ಶಾಖಾಧಿಕಾರಿಗಳ ಕಚೇರಿಗೆ ಬುಧವಾರ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ರೈತರ ಜಮೀನಿಗೆ 7 ಗಂಟೆ ವಿದ್ಯುತ್ ಪೂರೈಸಬೇಕೆಂಬ ಸರ್ಕಾರದ ಆದೇಶವಿದ್ದರೂ ಸೆಸ್ಕ್ ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ. ಮನಸೋಇಚ್ಛೆ ಕೆಲ ಗಂಟೆಗಳ ಕಾಲ ಮಾತ್ರ ನೀಡಲಾಗುತ್ತಿದೆ. ಇದರಿಂದ ವ್ಯವಸಾಯಕ್ಕೆ ತೊಂದರೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಐದಾರು ತಿಂಗಳಿನಿಂದಲೂ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇದೆ. ಪರಿಣಾಮ ನೀರು ಹಾಯಿಸಲು ಸಾಧ್ಯವಾಗದೆ ಬೆಳೆ ಒಣಗುತ್ತಿದೆ. ಆದ್ದರಿಂದ 1 ಎಕರೆಗೆ 50 ಸಾವಿರ ರೂ.ನಂತೆ ಪರಿಹಾರ ನೀಡಬೇಕು. ಇಲ್ಲವೇ ಹಗಲಿನಲ್ಲೇ 7 ಗಂಟೆ ವಿದ್ಯುತ್ ನೀಡಬೇಕು ಎಂದು ರೈತರು ಆಗ್ರಹಿಸಿದರು.

ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಎಇಇ ಲಿಂಗರಾಜು, ಮಳೆಯಾಗದ ಕಾರಣ ಜಲಾಶಯಗಳಲ್ಲಿ ನೀರಿಲ್ಲ. ಪರಿಣಾಮ ವಿದ್ಯುತ್ ಅಭಾವವಿದೆ. ನಮ್ಮ ತಾಲೂಕಿಗೆ 10 ಸಾವಿರ ಮೆಗಾವಾಟ್ ವಿದ್ಯುತ್ ಅಗತ್ಯವಿದೆ. ಆದರೆ 5 ಸಾವಿರ ಮೆಗಾವಾಟ್ ಮಾತ್ರ ಪೂರೈಕೆಯಾಗುತ್ತಿದೆ. ವಿದ್ಯುತ್ ಸಮಸ್ಯೆ ಇಡೀ ರಾಜ್ಯದಲ್ಲಿದೆ. ಸದ್ಯ ಹನೂರು ಕ್ಷೇತ್ರದ ಶಾಸಕರಿಗೂ ವಿದ್ಯುತ್ ಅಭಾವದ ಬಗ್ಗೆ ಮಾಹಿತಿ ನೀಡಿದ್ದೇನೆ. ಇದೀಗ ಮನವಿ ಪತ್ರ ನೀಡಿ ಮುಂದೆ ಸರ್ಕಾರದ ಗಮನ ಸೆಳೆಯುವುದಾಗಿ ಮನವೊಲಿಸಲು ಮುಂದಾದರು.

ಇದಕ್ಕೆ ಕುಪಿತಗೊಂಡ ರೈತರು ಬೆಳೆ ಒಣಗುತ್ತಿದೆ. ನೀವು ಬೇಕಾದರೆ ಶಾಸಕರ ಜತೆಗೂಡಿ ಸರ್ಕಾರದ ಗಮನ ಸೆಳೆಯಿರಿ. ನಮಗೆ ಮೊದಲು ವಿದ್ಯುತ್ ನೀಡಿ ಎಂದು ಆಗ್ರಹಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಜಟಾಪಟಿ ನಡೆಯಿತು.

ಎಇಇ ಲಿಂಗರಾಜು ಮಾತನಾಡಿ, ಗುರುವಾರ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಅವರನ್ನು ಬರಮಾಡಿಕೊಂಡು ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ತೆರಳಿದರು. ಸೆಸ್ಕ್ ಕಾರ್ಯಕಾರಿ ಸಮಿತಿ ಸದಸ್ಯ ಮಹದೇವಯ್ಯ, ಜೂನಿಯರ್ ಇಂಜಿನಿಯರ್ ರವಿಕುಮಾರ್, ರೈತರಾದ ಶಿವಮೂರ್ತಿ, ರವಿ ದೊಡ್ಡಿಂದುವಾಡಿ, ಬಸವರಾಜೇಗೌಡ, ಮನೋಜ್, ನರೇಂದ್ರ, ಮಹದೇವ, ನಾಗೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net