ಸೆರೆ ಹಿಡಿದು ತಿಂಗಳು ತುಂಬುವ ಮುನ್ನವೇ ತವರು ಸೇರಿದ ಮಖ್ನ ಆನೆ

Published on
ಕೊಡಗಿನ ಕುಶಾಲನಗರ ಬಳಿ ಕಂದಕ ದಾಟುತಿರುವ ಮಖ್ನ ಆನೆ
ಕೊಡಗಿನ ಕುಶಾಲನಗರ ಬಳಿ ಕಂದಕ ದಾಟುತಿರುವ ಮಖ್ನ ಆನೆ

ಕಾಂತರಾಜ್ ಹೊನ್ನೇಕೋಡಿ

ಸಕಲೇಶಪುರ: ಲಕ್ಷಾಂತರ ವೆಚ್ಚಮಾಡಿ ಬಂಡಿಪುರ ಅರಣ್ಯಕ್ಕೆ ಸಾಗಿಸಲಾಗಿದ್ದ ಮಖ್ನ ಆನೆ ತಿಂಗಳು ತುಂಬುವ ಮುನ್ನ ತವರು ಸೇರಿದೆ.

ಹೌದು ತಾಲೂಕಿನಲ್ಲಿ  ಕಾಡಾನೆ ಉಪಟಳ ಅತಿಯಾದ ಕಾರಣದಿಂದ ಎರಡು ಸಲಗ ಸೇರೆ ಹಿಡಿದು ಸ್ಥಳಾಂತರಿಸುವುದು ಮತ್ತೆರಡು ಹೆಣ್ಣಾನೆಗಳಿಗೆ ಕಾಲರ್ ಐಡಿ ಆಳವಡಿಸಿ ಬೀಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇದರಂತೆ ಸೆರೆಹಿಡಿದು ಸ್ಥಳಾಂತರಿಸ ಬೇಕಿದ್ದ ಸಲಗಗಳನ್ನು ಅರಣ್ಯ ಇಲಾಖೆ ಗುರುತಿಸಿತ್ತು.

ಆ ವೇಳೆಗೆ ಬೆಳಗೋಡು ಹೋಬಳಿಯ ಉದೇವಾರ, ಕೆಸಗುಲಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಲಗ್ಗೆ ಇಡಲು ಆರಂಭಿಸಿದ ಮಖ್ನ ಆನೆ ರಾತ್ರಿ ವೇಳೆ ಮನೆಯ ಕಿಟಕಿ,ಬಾಗಿಲುಗಳನ್ನು ಭಗ್ನಗೊಳಿಸಿ ಮನೆಯಲ್ಲಿದ್ದ ಧವಸ ಧಾನ್ಯಗಳನ್ನು ತಿನ್ನಲಾರಂಭಿಸಿದ್ದರಿಂದ  ಹೋಬಳಿಯ ಜನರ ನೆಮ್ಮದಿ ಯ ನಿದ್ರೆಗೂ ಭಂಗ ತಂದಿತ್ತು.

ಮನೆಗಳ ಮೇಲೆ ದಾಳಿ ನಡೆಸುವ ಆನೆಯನ್ನು ಸೆರೆಹಿಡಿಯದಿದ್ದರೆ ಅರಣ್ಯ ಇಲಾಖೆ ಘೋರಪರಿಣಾಮ ಎದುರಿಸ ಬೇಕಾಗಲಿದೆ ಎಂದು ಜನರು ಎಚ್ಚರಿಕೆ ನೀಡಲಾರಂಭಿದ್ದರಿಂದ ಹಿಡಿಯಲು ಉದ್ದೇಶಿಸಿದ್ದ ಸಲಗವೊಂದರ ಬದಲಿಗೆ ಮನೆಯ ಮೇಲೆ ದಾಳಿ ನಡೆಸುತ್ತಿದ್ದ ಮಖ್ನ ಆನೆ ಸೆರೆ ಹಿಡಿಯಲು ಉದ್ದೇಶಿಸಿದ ಅರಣ್ಯ ಇಲಾಖೆ ಜೂನ್ 29 ರಂದು ಕೂಡಗಿನ ತಿತಿಮತಿ ಹಾಗೂ ದುಬಾರೆ ಆನೆ ಧಾಮದಿಂದ ಆರು ಸಾಕಾನೆಗಳನ್ನು ಕರೆಸಿಕೊಂಡು ಅಂದೇ ಕಾರ್ಯಚರಣೆ ನಡೆಸಿ ಉದೇವಾರ ಗ್ರಾಮ ಹೊರವಲಯದ ಎಬಿಸಿ ಕಾಫಿ ಎಸ್ಟೇಟ್ ನಲ್ಲಿದ್ದ ಮಖ್ನ ಆನೆಯನ್ನು ಸೆರೆಹಿಡಿದು ಕಾಲರ್  ಐಡಿ ಆಳವಡಿಸಿ ಜೂನ್ 30 ರಂದು ಬಂಡಿಪುರ ಅರಣ್ಯಕ್ಕೆ ಸಾಗಿಸಲಾಗಿತ್ತು.

ಆದರೆ, ಅರಣ್ಯಕ್ಕೆ  ಬಿಟ್ಟ  ಮರುದಿನದಿಂದಲೇ ತವರು ಜಾಡು ಹಿಡಿದು ವಾಪಸ್ಸಾಗುತ್ತಿರುವ ಮಖ್ನ ಆನೆಯನ್ನು ವಾಪಸ್ಸ ಅಟ್ಟುವಂತೆ ಮೈಸೂರು ಹಾಗೂ ಕೂಡಗಿನ ಅರಣ್ಯ ಇಲಾಖೆಗೆ ಹಾಸನ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದರು. ಇದರಂತೆ ಮಖ್ನ ಆನೆ ಹಿಮ್ಮಟ್ಟಿಸುವ ಯತ್ನ ನಡೆಸಲಾಗಿದೆಯಾದರು  ಅರಣ್ಯ ಇಲಾಖೆಯ ಪ್ರಯತ್ನ ವಿಫಲಗೊಂಡಿದೆ. ಅಂತಿಮವಾಗಿ ನಾಗರಹೊಳೆ ಅಭಯಾರಣ್ಯ ಕ್ಕೆ ಅಟ್ಟುವ ಪ್ರಯತ್ನವು ಸಹ ಫಲನೀಡದಾಗಿದೆ.

ಜುಲೈ 17 ರಂದು ಕೂಡಗಿನ ಕುಶಾಲನಗರ ಸಮೀಪ ಕಾಡಾನೆಗಳು ಗ್ರಾಮ ಪ್ರವೇಶಿಸದಂತೆ ನಿರ್ಮಿಸಲಾಗಿರುವ ಕಂದಕವನ್ನು  ಬಾರಿ ಸಾಹಸದಲ್ಲಿ ದಾಟುತ್ತಿರುವ ವೀಡಿಯೊ ವೈರಲ್ ಆಗಿದೆ. ಜುಲೈ 23 ರಿಂದ 25 ರವರಗೆ ಸೋಮವಾರಪೇಟೆ ತಾಲ್ಲೂಕಿನ ಹಿತ್ತಲಮನೆ,ಗವಿಮಠದ ಸುತ್ತಲಿನ ಪ್ರದೇಶದಲ್ಲಿರುವುದು ಕಾಲರ್ ಐಡಿ ಮೂಲಕ ಪತ್ತೆಯಾಗಿದೆ. 

ಜುಲೈ 26 ಕ್ಕೆ  ತಾಲೂಕಿನಿಂದ 40 ಕಿ.ಮಿ ದೂರದಲ್ಲಿರುವುದು ಪತ್ತೆಯಾಗಿತ್ತು. ಜುಲೈ 27 ಕ್ಕೆ ಕೂಡಗಿನಿಂದ ತಾಲೂಕು ಪ್ರವೇಶಿದ್ದು ಇನ್ನೇರಡು ದಿನಗಳಲ್ಲಿ ತನ್ನ ತಂಡವನ್ನು ಸೇರ್ಪಡೆ ಗೊಳ್ಳಲಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆ. ತವರಿಗೆ ಮರಳಿರುವ ಮಖ್ನ ಆನೆಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡು ಬಾರದಿದ್ದರೆ ಮತ್ತೊಮ್ಮೆ ಸೆರೆ ಹಿಡಿದು ಆನೆಧಾಮಕ್ಕೆ ಸಾಗಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹೇಳಿದ್ದಾರೆ.   

ಕಾಡಾನೆಗಳಿಗೂ ಹೆಸರು: ಸಾಮಾನ್ಯವಾಗಿ ಸಾಕಾನೆಗಳನ್ನು ಹೆಸರು ಹಿಡಿದು ಗುರುತಿಸುವುದು ವಾಡಿಕೆ. ಆದರೆ ಸ್ಥಳೀಯ ಅರಣ್ಯ ಇಲಾಖೆಯ ನೌಕರರು ಕಾರ್ಯಚರಣೆಗೆ ಅನುಕೂಲವಾಗುವ ದೃಷ್ಟಿಯಿಂದ ಕಾಡಾನೆಗಳನ್ನು ಹೆಸರು ಮೂಲಕ ಗುರುತಿಸುತ್ತಿದ್ದು. ಅವುಗಳ ವರ್ತನೆ,ನಿಲುವು ಆದರಸಿ ತಂಡದ ಮುಖ್ಯ ಆನೆಗಳಿಗೆ ಹೆಸರು  ಇಡಲಾಗುತ್ತಿದೆ. ಮಾನವರನ್ನು ಕಂಡರೆ ಕರಡಿಯಂತೆ ಕುಣಿದು ಬರುವ ಕಾರಣಕ್ಕೆ ಕರಡಿ ., ನೋಡಲು ಬೆಟ್ಟದಂತೆ ಕಾಣುವ ಸಲಗಕ್ಕೆ ಮೌಂಟೇನ್, ರಾಜ ಗಾಭೀರ್ಯ  ದಲ್ಲಿರುವ ಸಲಗಕ್ಕೆ ಭೀಮ,ಗ್ರಾಮಗಳಿಗೆ ಲಗ್ಗೆ ಇಟ್ಟರು ಮನುಷ್ಯ ರ ಮೇಲೆ ಧಾಳಿ ನಡೆಸದ ಆನೆಗೆ ತಣ್ಣೀರು. ಕಾರ್ಯಚರಣೆಯಲ್ಲಿ ತಪ್ಪಿಸಿಕೊಂಡಿದ್ದ ಆನೆಗೆ ಮತ್ತೂರು ಹೀಗೆ ಹಲವು ಆನೆಗಳಿಗೆ ಹೆಸರಿಡಲಾಗಿದೆ. ಸದ್ಯ ತಾಲೂಕಿನಲ್ಲಿರುವ ಸುಮಾರು 80 ಆನೆಗಳಲ್ಲಿ ಬೀಮ ಅತ್ಯಂತ ಬಲಶಾಲಿ ಎಂಬುದು ಅರಣ್ಯ ಇಲಾಖೆ ನೌಕರರ ಹೇಳಿಕೆ.

ಮಿಲನದ ಕ್ಷೇತ್ರ: ತಾಲೂಕಿನಲ್ಲಿ ಅಪಾರ ಕಾಡಾನೆಗಳಿದ್ದು ಇಲ್ಲಿನ ಹೆಣ್ಣಾನೆಗಳನ್ನು ಆರಸಿ ಭದ್ರ ಅಭಯಾರಣ್ಯ,ನಾಗರಹೊಳೆ ಅರಣ್ಯದಿಂದ ಗಂಡಾನೆಗಳು ತಾಲೂಕಿಗೆ ಆಗಮಿಸುತ್ತಿದ್ದು ತಮ್ಮ ಪಾದಗಳ ಮೂಲಕ ಹೆಣ್ಣಾನೆ ಇರುವಿಕೆಯನ್ನು ಅರಿಯುವ ಗಂಡಾನೆಗಳು ಹೆಣ್ಣಾನೆಗಳ ಸನಿಹದಲ್ಲಿ ಒಂದೇರಡು ತಿಂಗಳು ಕಳೆದು ವಾಪಸ್ ಸಾಗುತ್ತವೆ ಎಂಬುದು ಕಾಡಾನೆ ತಜ್ಞ  ಮಹದೇವ್ ಅವರ ಹೇಳಿಕೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net