ಸೆ.27ರಂದು ಜಿಕೆವಿಕೆಯಲ್ಲಿ ರೈತ ಸಂತೆ ನಿಗದಿ

Published on

ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯ ಹಸಿರು ಪರಿಸರವನ್ನು ಪರಿಚಯಿಸುವ ‘ಕೃಷಿ ಪರಿಸರದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವು ಶನಿವಾರ (ಸೆ.27) ನಡೆಯಲಿದೆ. ಜತೆಗೆ ತೋಟದಿಂದ ನೇರ ಗ್ರಾಹಕರಿಗೆ ಕೃಷಿ ಉತ್ಪನ್ನಗಳನ್ನು ತಲುಪಿಸುವ ರೈತ ಸಂತೆಯೂ ಆಯೋಜನೆಗೊಂಡಿದೆ.

ಜಿಕೆವಿಕೆಯ ವಿಶಾಲ ಜಾಗದಲ್ಲಿ ಹರಡಿಕೊಂಡಿರುವ ವಿವಿಯ ವಿವಿಧ ವಿಭಾಗಗಳು ಹಾಗೂ ಕೃಷಿ ವಸ್ತುಸಂಗ್ರಹಾಲಯ, ಬೆಳೆ ತಾಕುಗಳು, ಪ್ರಾತ್ಯಕ್ಷಿಕೆ ಕೇಂದ್ರಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿನ ಚಟುವಟಿಕೆ ಬಗ್ಗೆ ಈ ನಡಿಗೆ ವೇಳೆ ಸಾರ್ವಜನಿಕರಿಗೆ ತಿಳಿಸಿಕೊಡಲಾಗುತ್ತದೆ. ಅಂದು ಬೆಳಗ್ಗೆ 6ರಿಂದ 10.30ರ ವರೆಗೆ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ಪಾಲ್ಗೊಳ್ಳಲು ಇಚ್ಛಿಸುವವರು ವಿವಿಯ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ನಡಿಗೆ ಜತೆಗೆ ಕ್ಯಾಂಪಸ್‌ನ ಗಣಪತಿ ದೇಗುಲ ಬಳಿ ರೈತ ಸಂತೆ ಆಯೋಜಿಸಲಾಗಿದೆ. ರೈತರು ತಮ್ಮ ಹೊಲ, ತೋಟದಲ್ಲಿ ಬೆಳೆದ ಹಣ್ಣು, ತರಕಾರಿ, ಸಾವಯವ ಉತ್ಪನ್ನ ಹಾಗೂ ಇತರ ಬೆಳೆಗಳನ್ನು ಕೈಗೆಟಕುವ ದರದಲ್ಲಿ ಮಾರಾಟ ಮಾಡಲಿದ್ದಾರೆ. ಮಕ್ಕಳಿಗೆ ಎತ್ತಿನ ಬಂಡಿ ಸವಾರಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವಿಯ ಕೃಷಿ ಮಾಹಿತಿ ಘಟಕದ ಮುಖ್ಯಸ್ಥ ಕೆ.ಪಿ. ರಘುಪ್ರಸಾದ್ ತಿಳಿಸಿದ್ದಾರೆ.

ಕೃಷಿ ವಿವಿಯು ತಿಂಗಳ 4ನೇ ಶನಿವಾರ ಆಯೋಜಿಸುತ್ತಿರುವ ರೈತ ಸಂತೆಗೆ ಅಭೂತಪೂರ್ವ ಯಶಸ್ಸು ದೊರೆತಿದೆ. ನಗರ ವಾಸಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಈ ಕಾರ್ಯಕ್ರಮಕ್ಕೆ ಆಗಮಿಸುವ ನಾಗರಿಕರಿಗೆ ಜಿಕೆವಿಕೆಯ ಹಸಿರು ಪರಿಸರವನ್ನು ಪರಿಚಯಿಸಲಾಗುತ್ತದೆ. ಈ ನಡಿಗೆ ಉತ್ತಮ ಆರೋಗ್ಯ ಹಾಗೂ ಪರಿಸರ ಪ್ರೇಮವನ್ನು ಇನ್ನಷ್ಟು ಹೆಚ್ಚಿಸಲಿದೆ.

- ಡಾ. ಎಸ್.ವಿ.ಸುರೇಶ್, ಕೃಷಿ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net