

ಹುಣಸೂರು: ಸೂಡಾನ್ ದೇಶದಲ್ಲಿ ಸಿಲುಕಿರುವ ತಾಲೂಕಿನ ಪಕ್ಷಿರಾಜಪುರದ ನಿವಾಸಿಗಳನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ರಮ ವಹಿಸಿದ್ದು, ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ತಾಲೂಕಿನ ಪಕ್ಷಿರಾಜಪುರ ಒಂದನೇ ಬ್ಲಾಕ್‌ಗೆ ಶನಿವಾರ ಭೇಟಿ ನೀಡಿ, ವಿದೇಶದಲ್ಲಿ ವ್ಯವಹಾರಕ್ಕೆ ತೆರಳಿದ್ದ ಹಕ್ಕಿಪಿಕ್ಕಿ ಸಮುದಾಯದ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು. ಸೂಡಾನ್ ದೇಶದಲ್ಲಿ ಸೇನೆ ಮತ್ತು ಅರೆಸೇನೆಯೊಂದಿಗೆ ಆಂತರಿಕ ಘರ್ಷಣೆ ಆರಂಭವಾಗಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆ ತರುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಪಕ್ಷಿರಾಜಪುರದ ಮುಖಂಡ ನಂಜುಂಡಸ್ವಾಮಿ ಮಾತನಾಡಿ, ಇಲ್ಲಿನ ನಿವಾಸಿಗಳು ಆಯುರ್ವೇದ ಮತ್ತು ಮಸಾಜ್ ಮಾಡುವಲ್ಲಿ ಪರಿಣಿತರಿದ್ದು, ಹಣ ಸಂಪಾದನೆಗೆ ವಿದೇಶಗಳಿಗೆ ಹೋಗಿ ವ್ಯವಹಾರ ಮಾಡುವ ಪದ್ಧತಿ ಇದೆ. ಕೆಲವರಿಗೆ ಕೃಷಿ ಭೂಮಿ ಮಂಜೂರಾಗಿದ್ದರೂ ಈವರಗೆ ಭೂಮಿ ಗುರುತಿಸುವ ಕೆಲಸವಾಗದೆ ಒಂದೇ ಸ್ಥಳದಲ್ಲಿ ನೆಲೆಕಟ್ಟಿಕೊಳ್ಳಲಾಗುತ್ತಿಲ್ಲ. ಸರ್ಕಾರದ ಮುಂದೆ ವಿಷಯ ಪ್ರಸ್ತಾಪಿಸಿ ಮಂಜೂರಾಗಿರುವ ಭೂಮಿ ಗುರುತಿಸಿ ಹಕ್ಕಿಪಿಕ್ಕಿ ಸಮುದಾಯಕ್ಕೆ ನೀಡುವಂತೆ ಮನವಿ ಮಾಡಿದರು.
ಪಕ್ಷಿರಾಜಪುರದ ಕುಟುಂಬ ಸದಸ್ಯರು ತಮ್ಮವರನ್ನು ಬೇಗ ಕರೆತರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವಂತೆ ಮನವಿ ಮಾಡಿದರು.
ಅತಂತ್ರ ಸರ್ಕಾರ ತರಬೇಡಿ: ರಾಜ್ಯದಲ್ಲಿ ಪ್ರಸ್ತುತ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಗಂಭೀರ ಚಿಂತನೆ ನಡೆಸಿ ಯಾವುದೇ ಕಾರಣಕ್ಕೂ ಅತಂತ್ರ ಸರ್ಕಾರ ಬರದಂತೆ ಎಚ್ಚರವಹಿಸುವುದು ಅಗತ್ಯ. ಮತದಾರರು ಕಡ್ಡಾಯವಾಗಿ ಮತಚಲಾಯಿಸಬೇಕು. ಸಮ್ಮಿಶ್ರ ಸರ್ಕಾರಗಳ ಹಣೆಬರಹ ಕಳೆದ 5 ವರ್ಷಗಳಿಂದ ನೋಡಿದ್ದೇವೆ. ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಹಾಗಾಗಿ ಜನತೆ ಎಚ್ಚರ ವಹಿಸಬೇಕು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೋರಿದರು.
ಮುಖಂಡರಾದ ಬಾಲಕೃಷ್ಣ, ಕುನ್ನೇಗೌಡ, ಮಹೇಶ್, ಸಣ್ಣೇಗೌಡ ಇತರರು ಇದ್ದರು.