ಸುಹಾಸ್‌ಶೆಟ್ಟಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

CTD STRIKE-BJP--
Published on

ಚಿತ್ರದುರ್ಗ: ಮಂಗಳೂರಲ್ಲಿ ನಡೆದ ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್‌ಶೆಟ್ಟಿ ಹತ್ಯೆ ಖಂಡಿಸಿ ಶುಕ್ರವಾರ ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜ್ಯಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾ ನಿರತರು, ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆಗೆಗೊಳಪಡಿಸುವಂತೆ ಆಗ್ರಹಿಸಿದರು.

ಪಕ್ಷದ ರೈತ ಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದುಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಇದಕ್ಕೆ ರಾಜ್ಯಸರ್ಕಾರದ ಕುಮ್ಮಕ್ಕು ಕಾರಣವಾಗಿದೆ. ಆರೋಪಿಗಳನ್ನು ಬಂಧಿಸುವ ಬದಲು ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಹಿಂದು ವಿರೋಧಿಯಾಗಿದೆ. ಇಲ್ಲಿ ಹಿಂದುಗಳು ನೆಮ್ಮದಿಯಿಂದ ಬದುಕು ನಡೆಸುವುದು ಕಾಂಗ್ರೆಸ್ ಆಡಳಿತದಲ್ಲಿ ಕಷ್ಟವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕ ಎನ್ನುವುದು ಆರೋಪಿಗಳ ಸ್ವರ್ಗವಾಗಿದೆ. ಇಲ್ಲಿ ಏನೇ ಮಾಡಿದರೂ ಯಾರೂ ಕೇಳುವವರಿಲ್ಲ ಎನ್ನುವಂತಾಗಿದೆ. ಆರೋಪಿಗಳನ್ನು ಬಂಧಿಸಲು ಮುಂದಾಗುವ ಪೋಲಿಸರಿಗೆ ಅಡ್ಡಿ ಪಡಿಸಲಾಗುತ್ತಿದೆ ಎಂದು ದೂರಿದರು.

ಪಕ್ಷದ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್‌ಯಾದವ್ ಮಾತನಾಡಿ, ನಮ್ಮ ರಾಜ್ಯದಲ್ಲಿರುವ ಗೂಂಡಾ ಸರ್ಕಾರ, ಹಿಂದುಗಳ ರಕ್ಷಣೆಯಲ್ಲಿ ವಿಫಲವಾಗಿದೆ. ಈ ಸರ್ಕಾರದ ಓಲೈಕೆ ನೀತಿಯಿಂದಾಗಿ ನಿರ್ದಿಷ್ಟ ಕೋಮಿನವರ ಅರ್ಭಟ ಹೆಚ್ಚಾಗಿದೆ. ಇದನ್ನು ತಡೆಯುವವರಿಲ್ಲ ಎನ್ನುವಂತಾಗಿದೆ. ಇದಕ್ಕೆ ಕಡಿವಾಣ ಹಾಕುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ಯರ‌್ರಿಸ್ವಾಮಿ, ನಗರಸಭೆ ಮಾಜಿ ಸದಸ್ಯ ನಾಗರಾಜ್, ಕಿರಣ್, ಯಶವಂತ, ನಂದಿ ನಾಗರಾಜ್, ಚಂದ್ರಶೇಖರ್, ಮಹಾಂತೇಶ್ ಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net