

ಸಾಗರ: ನಾನು ಮನುಷ್ಯ ಧರ್ಮದ ಪ್ರತಿಪಾದಕ. ಜಾತಿಮತ ಪಂಥವನ್ನು ಬಿಟ್ಟು ಸರ್ವ ಜನಾಂಗಗಳು ಅಭಿವೃದ್ಧಿ ಹೊಂದಬೇಕು. ಸಮ ಸಮಾಜ ನಿರ್ಮಾಣವಾಗಬೇಕು ಎನ್ನುವುದು ನನ್ನ ಪ್ರಮುಖ ಗುರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಂತ ಜೋಸೆರ ಚರ್ಚ್ ಆವರಣದಲ್ಲಿ ಮಂಗಳವಾರ ನಗರಸಭೆಯಿಂದ ಅಳವಡಿಸುತ್ತಿರುವ ಹೈಮಾಸ್ಟ್ ವಿದ್ಯುತ್ ದೀಪಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲ ಜಾತಿ, ಧರ್ಮಗಳ ಪಾತ್ರವೂ ಅವಶ್ಯ. ಸಾಮರಸ್ಯ ಸಮಾಜವಿದ್ದಾಗ ಮಾತ್ರ ಆರೋಗ್ಯಪೂರ್ಣ ವಾತಾವರಣ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದ ಏಳಿಗೆಗಾಗಿ ಅಗತ್ಯ ಯೋಜನೆ ರೂಪಿಸಲಾಗುತ್ತದೆ ಎಂದರು.
ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಮತ್ತು ಧರ್ಮಗುರುಗಳು ಚುನಾವಣೆಗೂ ಮುನ್ನ ಕೆಲವು ಬೇಡಿಕೆಗಳನ್ನು ಇರಿಸಿದ್ದರು. ಅದಕ್ಕೆ ಪೂರಕವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದ್ದು, ಹೈಮಾಸ್ಟ್ ದೀಪದ ಬೇಡಿಕೆ ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು.
ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಉಮೇಶ್, ರವಿ ಲಿಂಗನಮಕ್ಕಿ, ಪ್ರಮುಖರಾದ ಸುರೇಶಬಾಬು, ತಾರಾಮೂರ್ತಿ, ಅನ್ವರ್ ಬಾಷಾ, ಕೆ.ಸಿದ್ದಪ್ಪ, ಚಂದ್ರಪ್ಪ, ಉಷಾ, ಮರಿಯಾ ಲೀಮಾ, ಮೈಕೆಲ್ ಡಿಸೋಜ, ವಿಲ್ಸನ್ ಗೋನ್ಸಾಲ್ವಿಸ್, ಅರ್ಥರ್ ಗೋಮ್ಸ್ ಇತರರಿದ್ದರು.