ಸುಳ್ಳು ಆರೋಪದ ವಿರುದ್ಧ ಕಾನೂನು ಹೋರಾಟ : ಕಾಂಗ್ರೆಸ್ ಟೀಕೆಗೆ ಜಯಮ್ಮ ಪ್ರತ್ಯುತ್ತರ

Published on

ದಾವಣಗೆರೆ: ಬಿಜೆಪಿ ಮುಖಂಡರ ವಿರುದ್ಧ ಸುಳ್ಳು ಆರೋಪ ಮುಂದುವರಿಸುವ ಕಾಂಗ್ರೆಸ್ಸಿಗರ ವಿರುದ್ಧ ಕಾನೂನು ಹೋರಾಟಕ್ಕೆ ಹಿಂಜರಿಯುವುದಿಲ್ಲ ಎಂದು ಪಾಲಿಕೆ ನಾಮನಿರ್ದೇಶಿತ ಸದಸ್ಯೆ ಎಚ್.ಸಿ.ಜಯಮ್ಮ ಎಚ್ಚರಿಸಿದ್ದಾರೆ.

ಸೋಲಿನ ಹತಾಷೆಯಲ್ಲಿರುವ ಕಾಂಗ್ರೆಸ್‌ನವರು ನಿರಾಧಾರ ಆರೋಪ ಮಾಡುತ್ತಿದ್ದಾರೆ. ಅಪಹರಣ ಪ್ರಕರಣ, ಗುಂಡಾ ವರ್ತನೆಯ ರಾಜಕಾರಣ ವೈಖರಿಗೆ ಹೆಸರಾದ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ ಶೆಟ್ಟಿ, ಸಂಸದರ ಬಗ್ಗೆ ಟೀಕಿಸಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ವರಿಷ್ಠರಂತೆ ಸಿದ್ದೇಶ್ವರ ಅವರು ಸಮಾಧಿಗಳನ್ನು ಕಬಳಿಸಿಲ್ಲ. ವಿದ್ಯುತ್ ಕಳ್ಳತನ ಮಾಡಿಲ್ಲ. ರೌಡಿಗಳನ್ನು ಚುನಾವಣೆ ಪ್ರಚಾರಕ್ಕೆ ಕರೆಸಲಿಲ್ಲ. ಅವರ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಕರೆದರೂ ಬಾರದ ಕಾಂಗ್ರೆಸ್ಸಿಗರು ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಪ್ರತಿಕ್ರಿಯಿಸಿದರು.

ಅನಿತಾಬಾಯಿ ಮಾಲತೇಶ್ ಒಂದು ವರ್ಷ ಮೇಯರ್ ಆಗಿದ್ದಾಗ ನೀಡಿದ್ದ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಲಿ. ಅವರ ಪತಿ ದೂಡಾ ಅಧ್ಯಕ್ಷರಾಗಿದ್ದಾಗ ತಮ್ಮ ಕುಟುಂಬ ಸದಸ್ಯರ ಹೆಸರಲ್ಲಿ ನಿವೇಶನ ಹಂಚಿಕೆ ಮಾಡಿರಲಿಲ್ಲವೆ? ನಿಜಲಿಂಗಪ್ಪ ಬಡಾವಣೆಯಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡದ ಎಷ್ಟು ಅಂತಸ್ತಿಗೆ ಪರವಾನಿಗೆ ಪಡೆದಿದ್ದರು ಎಂಬ ಮಾಹಿತಿ ನಮಗಿದೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಶ್, ಪ್ರ.ಕಾರ್ಯದರ್ಶಿ ಸವಿತಾ ರವಿಕುಮಾರ್, ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ಜಿಪಂ ಸದಸ್ಯೆ ಉಮಾ ರಮೇಶ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net