ಸುಳ್ಯ ಸಂಪತ್ ಕೊಲೆ ಪ್ರಕರಣ ಐವರು ಆರೋಪಿಗಳ ಬಂಧನ

Published on

ಮಂಗಳೂರು: ಬಾಲಚಂದ್ರ ಕಳಗಿ ಕೊಲೆ ಆರೋಪಿಗಳಲ್ಲೊಬ್ಬ ಸಂಪತ್ ಕುಮಾರ್‌ನನ್ನು ಗುರವಾರ ಬೆಳಗ್ಗೆ ಸುಳ್ಯದ ಶಾಂತಿನಗರದಲ್ಲಿ ನಾಡ ಕೋವಿಯಿಂದ ಗುಂಡು ಹೊಡೆದು ಹತ್ಯೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಿಸಿಲೆ ಘಾಟ್‌ನಲ್ಲಿ ಬಂಧಿಸಿದ್ದಾರೆ.
ಗುರುತು ಪತ್ತೆಗೆ ಪರೇಡ್ ನಡೆಸಲಿರುವುದರಿಂದ ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಬಂಧಿತರಲ್ಲಿ ನಾಲ್ವರು ಕಲ್ಲುಗುಂಡಿಯವರಾದರೆ ಇನ್ನೋರ್ವ ಜಾಲ್ಸೂರು ನಿವಾಸಿ. ಹತ್ಯೆ ನಡೆಸಿದ ಆರೋಪಿಗಳು ಯಾರೆಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು ಸುಳ್ಯ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ಅವರ ಪತ್ತೆಗೆ ಎರಡು ದಿನಗಳಿಂದ ಕಾರ್ಯಾಚರಣೆ ಮುಂದುವರಿಸಿದ್ದರು.  
ಬೆಳಗ್ಗೆ ಕಾರಿನಲ್ಲಿ ಹೊರಟ ಸಂಪತ್ ಕುಮಾರ್‌ನನ್ನು ತಡೆದು ಕೋವಿಯಿಂದ ಗುಂಡು ಹಾರಿಸಲಾಗಿತ್ತು. ಈ ಸಂದರ್ಭ ಅಪಾಯ ಅರಿತ ಸಂಪತ್ ಸಮೀಪದಲ್ಲಿದ್ದ ಮನೆಯೊಳಗೆ ನುಗ್ಗಿದಾಗ ಅಲ್ಲಿಗೂ ಅಟ್ಟಾಡಿಸಿಕೊಂಡು ಬಂದ ತಂಡ ತಲವಾರುಗಳಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿತ್ತು.
ಈ ನಡುವೆ ಶುಕ್ರವಾರ ಅವರು ಕೃತ್ಯಕ್ಕೆ ಬಳಸಿದ ಹಸಿರು ಬಣ್ಣದ ಕ್ವಾಲೀಸ್ ಕಾರು ಅರಂತೋಡು ಕಳುಬೈಲ್ ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ. ಕಾರು ಚೊಕ್ಕಾಡಿಯ ಪದ್ಮನಾಭ ಎಂಬವರಿಗೆ ಸೇರಿದ್ದಾಗಿದೆ. ಕೊಲೆ ನಡೆಯುವ ಮುನ್ನಾ ದಿನ ಶೂಟಿಂಗ್ ಇದೆ ಎಂದು ಮನು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಬಂದಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಸಂಯಾಚರಣೆ ನಡೆಸಿದ ಪೊಲೀಸರ ಜತೆ ಸಂಪತ್ ಕೊಲೆ ಪ್ರಕರಣದ ಬಂಧಿತ ಆರೋಪಿಗಳು
ಕಾರ್ಸಂಯಾಚರಣೆ ನಡೆಸಿದ ಪೊಲೀಸರ ಜತೆ ಸಂಪತ್ ಕೊಲೆ ಪ್ರಕರಣದ ಬಂಧಿತ ಆರೋಪಿಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net