ಸುರಪುರದಲ್ಲಿ ಸ್ವಚ್ಛತೆ ಮರೀಚಿಕೆ

0701 Surapur 01(01)
Published on

ಸುರಪುರ: ದೊರೆಗಳ ನಾಡು ಎಂದು ಕರೆಯಲ್ಪಸುವ ಸುರಪುರ ಪಟ್ಟಣ ನೋಡಿದರೆ ಸ್ವಚ್ಛತೆ ಎಂಬುದೇ ಮರೆತಂತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ, ರಸ್ತೆ ತುಂಬೆಲ್ಲ ಚರಂಡಿ ನೀರು ಹರಿಯುತ್ತಿರುವುದನ್ನು ನೋಡಿದರೆ ಮೈಗೆ ಮುಳ್ಳು ಬಾರದೆ ಇರದು.ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ ಸ್ವಚ್ಛತೆಗೆ ಮಾತ್ರ ಮಂಕು ಬಡಿದಂತಾಗಿದೆ. ಪ್ರತಿ ವಾರ್ಡ್​ಗಳಲ್ಲಿ ಚರಂಡಿ ತ್ಯಾಜ್ಯದ ನೀರು, ಕಸದ ರಾಶಿ ಕಣ್ಣ ಮುಂದೆ ರಾರಾಜಿಸುವಂತಿದ್ದು, ಇದು ನಗರಸಭೆ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಕಸದ ರಾಶಿ: ನಗರದ ಬಡಿ ಮಜೀದ್ ಬಳಿಯ ಖಾಸಗಿ ನಿವೇಶನದಲ್ಲಿ ಕಸದ ರಾಶಿಯೇ ಹಾಕಲಾಗಿದೆ. ಹಸು, ಹಂದಿ, ನಾಯಿಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಬಂದರೆ ಮೂಗು ತೆರೆಯುವಂತ್ತಿಲ್ಲ. ನೋಣ, ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. ಕರೊನಾ ಆತಂಕದಲ್ಲಿರುವ ಜನತೆಗೆ ಸಾಂಕ್ರಾಮಿಕ ರೋಗದ ಭೀತಿ ಕೂಡ ಎದುರಿಸಬೇಕಾಗಿದೆ.

ರಸ್ತೆಗಳ ಮೇಲೆ ಹೆಚ್ಚುತ್ತಿರುವ ಮಣ್ಣಿನಿಂದಾಗಿ ಧೂಳು ನಗರದ ಜನತೆಯ ಜೀವ ಹಿಂಡುತ್ತಿದೆ. ವಾಹನಗಳು ವೇಗವಾಗಿ ಹೋದರೆ ಧುತ್ತೆಂದು ಧೂಳು ಎದ್ದೇಳುತ್ತದೆ. ರಸ್ತೆಯಲ್ಲಿ ಹೆಚ್ಚು ಮಣ್ಣು ಜಮೆಯಾಗಿದ್ದರಿಂದ ದ್ವಿಚಕ್ರ ವಾಹನ ಬೀಳುವ ಸಂಭವ ಹೆಚ್ಚಾಗಿದೆ. ನಗರದಲ್ಲಿ ಇಂತಹ ಹತ್ತು ಹಲವು ಸಮಸ್ಯೆ ಕಣ್ಣಿಗೆ ರಾಚುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ.

ರಸ್ತೆ ಮೇಲೆ ಚರಂಡಿ ನೀರು: ವಾರ್ಡ್​ ನಂ. 31ರ ಚರಂಡಿಯಲ್ಲಿ ಕಸ, ಹೂಳು ತುಂಬಿಕೊಂಡಿದ್ದರಿಂದ ಸರಾಗವಾಗಿ ಹೋಗಬೇಕಾದ ನೀರು ಇಡೀ ರಸ್ತೆ ಆವರಿಸಿಕೊಂಡಿದೆ. ಇದರಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಗಿದ್ದು, ಇಂಥ ಕಲುಷಿತ ನೀರಿನಲ್ಲೇ ಜನರು ನಿತ್ಯ ಸಂಚರಿಸುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ ನಗರಸಭೆ ಸಿಬ್ಬಂದಿ.

ಇನ್ನೂ ನಗರದ ಪ್ರಮುಖ ರಸ್ತೆ ಮತ್ತು ಚರಂಡಿಯಲ್ಲಿನ ಕಸ ಮತ್ತು ಹೂಳು ಎತ್ತುವುದು ಬಿಟ್ಟರೆ ಇನ್ಯಾವ ವಾರ್ಡ್​ಗಳಲ್ಲಿ ಇದು ಕಾಣ ಸಿಗದು. ವಾರದಲ್ಲಿ ಒಂದು ಬಾರಿ ಚರಂಡಿ ಸ್ವಚ್ಛತೆ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ. ಆದರೆ ಕೆಲಸ ಮಾಡದೇ ಸಂಬಳ ಎಣಿಸುತ್ತಿರುವ ಸಿಬ್ಬಂದಿ ವಿರುದ್ಧ ನಿತ್ಯ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net