ಸುಭಾಷ್‌ಚಂದ್ರ ಬೋಸ್ ಮರೆಯದ ಮಾಣಿಕ್ಯ: ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ತ್ಯಾಗರಾಜ್ ಹೇಳಿಕೆ

23-klr-17 NEW
Published on

ಕೋಲಾರ: ಬ್ರಿಟಿಷರ ಗುಲಾಮಗಿರಿ ವಿರುದ್ಧ ಹೋರಾಡಿದ ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತೀಯರು ಮರೆಯಲಾಗದ ಮಾಣಿಕ್ಯ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ತ್ಯಾಗರಾಜ್ ಹೇಳಿದರು.

ನಗರದ ಸುಭಾಷ್ ಪ್ರೌಢಶಾಲೆಯಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಂಸ್ಕೃತಿಕ ಪರಿಷತ್ ಹಾಗೂ ಜಯ ಕರ್ನಾಟಕ ಸಂಘಟನೆಯಿಂದ ಏರ್ಪಡಿಸಿದ್ದ ಸುಭಾಷ್‌ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಅವರು ಯುವಕರಲ್ಲಿ ದೇಶ ಪ್ರೇಮ ತುಂಬಿದ ಮಹಾನ್ ನಾಯಕ. ಬ್ರಿಟಿಷರ ವಿರುದ್ಧ ಸೇನೆಯನ್ನು ಕಟ್ಟಿ ಅದರ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದರು ಎಂದು ತಿಳಿಸಿದರು.

ನೇತಾಜಿ ತಮ್ಮ 41ನೇ ವಯಸ್ಸಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅಂತರ ರಾಷ್ಟ್ರೀಯ ವಿಚಾರಗಳಲ್ಲಿ ಸಾಕಷ್ಟು ಪರಿಣಿತರಾಗಿದ್ದರು, ಯುವಕರು ದೇಶಕ್ಕಾಗಿ ನೇತಾಜಿ ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದರು.

ಸಾಧಕರನ್ನು ಸನ್ಮಾನಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ದೇಶಭಕ್ತಿಯ ಹುರುಪು ಹಾಗೂ ಅಚಲ ಚೈತನ್ಯ ಇಂದಿನ ದಿನಗಳಲ್ಲಿ ಅತ್ಯಂತ ಪ್ರಸ್ತುತ. ಅವರಲ್ಲಿದ್ದ ಸ್ಥೈರ್ಯ ಹಾಗೂ ನಿಸ್ವಾರ್ಥ ಸಮರ್ಪಣಾ ಮನೋಭಾವ ಪ್ರತಿಯೊಬ್ಬ ಭಾರತೀಯರನ್ನೂ ಪ್ರೇರೇಪಿಸಿ ಅವರನ್ನು ಆರಾಧಿಸುವಂತೆ ಮಾಡಿದೆ ಎಂದರು.

ನವಭಾರತದ ನಿರ್ಮಾಣದಲ್ಲಿ ಅವರ ಪರಮ ದೇಶಭಕ್ತಿ ಹಾಗೂ ಜೀವನ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ತಿಳಿಸಿದರು.

ಜಿಲ್ಲಾ ಭಾರತ ಸೇವಾದಳ ಕಾರ್ಯಕಾರಿ ಸಮಿತಿ ಸದಸ್ಯ ಫಲ್ಗುಣ, ಜಿಲ್ಲಾ ಕನ್ನಡ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣಪ್ಪ, ಯುವ ಸಾಹಿತಿ ಡಾ.ಶರಣಪ್ಪ ಗಬ್ಬೂರ್, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ರುದ್ರಪ್ಪ, ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಡಿ.ಜೆ.ಮನೋಹರ್, ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಟೈಗರ್ ವೆಂಕಟೇಶ್, ಸುಭಾಷ್ ಪ್ರೌಢಶಾಲೆ ಮುಖ್ಯಸ್ಥ ನವೀನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net