ಸುನೀತಾ ವಿಲಿಯಮ್ಸ್ ಮಹಿಳಾ ಸಾಧಕಿಯರ ಪ್ರತೀಕ

3
Published on

ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಎಲ್ಲ ಮಹಿಳಾ ಸಾಧಕಿಯರ ಪ್ರತೀಕ ಮತ್ತು ಸ್ಫೂರ್ತಿ ಎಂದು ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಎನ್.ಉಷಾರಾಣಿ ತಿಳಿಸಿದರು.

ಕನ್ನಡ ಲೇಖಕಿಯರ ಟ್ರಸ್ಟ್ ಮತ್ತು ಜೈನಶಾಸ್ತ್ರ ಮತ್ತು ಪ್ರಾಕೃತಿಕ ಅಧ್ಯಯನ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಉದ್ಘಾಟಿಸಿ ಮಾತನಾಡಿದರು. 9 ತಿಂಗಳ ಬಳಿಕ ಸುನೀತಾ ವಿಲಿಯಮ್ಸ್ ತಂಡ ಭೂ ಸ್ಪರ್ಶ ಮಾಡಿದ ಕ್ಷಣಗಳನ್ನು ಜಗತ್ತು ಕುತೂಹಲದಿಂದ ನೋಡಿತು. ಅವರ ಸಾಧನೆಯಿಂದ ಮಹಿಳೆಯರ ಸಾಮರ್ಥ್ಯ ಆಕಾಶದಷ್ಟು ಅನಂತ ಮತ್ತು ಭೂಮಿಯಷ್ಟು ಆಳವಾಗಿದೆ ಎಂದರು.

ಶೇ.50 ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿಯೂ ಪುರುಷ ಪ್ರದಾನ ಸಮಾಜದಲ್ಲಿ ದ್ವಿತೀಯ ದರ್ಜೆ ಸ್ಥಾನದಲ್ಲಿದ್ದಾಳೆ. ಈ ಮಹಾಪಯಣದಲ್ಲಿ ಪ್ರತಿ ಸ್ತ್ರೀ ಸೋಲು, ಗೆಲುವು ಕಂಡಿದ್ದಾಳೆ. ಆದರೆ, ಉತ್ಸಾಹ ಕುಂದಿಲ್ಲ. ಹೋರಾಟ ಮುಂದುವರಿದಿದೆ ಎಂದು ಹೇಳಿದರು.

ಸಾರ್ವಜನಿಕ ವಲಯದಲ್ಲಿ ಮಹಿಳೆಯರ ದನಿ ಕೇಳಿಸುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 33 ಮೀಸಲು ದೊರೆಯಲಿದೆ. ಆಗ ದೊರೆಯುವ ರಾಜಕೀಯ ಅಧಿಕಾರವನ್ನು ಬಳಸುವ ಪರಿಣತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ನೀತಿ ನಿಯಮ ರೂಪಿಸುವ ಸಾಮರ್ಥ್ಯ ಸಿದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಈಚೆಗೆ ವರ್ಲ್ಡ್ ಬ್ಯಾಂಕ್ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಕಾರ್ಮಿಕ ವಲಯದಲ್ಲಿ ಮಹಿಳೆಯರ ಸಹಭಾಗಿತ್ವ ಅತ್ಯಂತ ಕಡಿಮೆ ಇರುವುದಾಗಿ ಹೇಳಿದೆ. ಶೇ.21 ರಷ್ಟು ಮಹಿಳೆಯರು ಕಾರ್ಮಿಕರಾಗಿದ್ದಾರೆ. ಈ ಪ್ರಮಾಣ ಶೇ.50ಕ್ಕೆ ಏರಿಕೆಯಾಗಬೇಕು. ಆಗ ದೇಶದ ಜಿಡಿಪಿಗೂ ಕೊಡುಗೆ ನೀಡಿದಂತಾಗುತ್ತದೆ ಎಂದು ವಿವರಿಸಿದರು.

ನೊಬಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮ್ಯರ್ತಸೇನ್ ಅಭಿವೃದ್ಧಿ ಎಂದರೆ ಆಯ್ಕೆ ಎಂದಿದ್ದಾರೆ. ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಪಡೆಯುವುದರಿಂದ ಆಯ್ಕೆಯ ಸ್ವಾತಂತ್ರ್ಯ ದೊರೆಯುತ್ತದೆ. ಸ್ವಾಭಿಮಾನ ಬರುತ್ತದೆ. ಗ್ರಾಮೀಣ ಮಹಿಳೆಯರ ಆರ್ಥಿಕವಾಗಿ ಸದೃಢರಾಗಿದ್ದು, ಮುಖ್ಯವಾಹಿನಿಗೆ ತರಬೇಕಿದೆ ಎಂದರು.

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತೆ ಡಾ.ವೈ.ಸಿ. ಭಾನುಮತಿ, ವಿಜ್ಞಾನ ಲೇಖಕಿ ಶ್ರೀಮತಿ ಹರಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಲೇಖಕಿಯರ ಟ್ರಸ್ಟ್ ಅಧ್ಯಕ್ಷೆ ಪ್ರೊ. ಪದ್ಮಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳಾ ಮಾನಸ, ಜೈನಶಾಸ್ತ್ರ ಮತ್ತು ಪ್ರಾಕೃತಿಕ ಅಧ್ಯಯನ ವಿಭಾಗದ ಪ್ರೊ.ಎಸ್.ಡಿ. ಶಶಿಕಲಾ, ಕಾರ್ಯದರ್ಶಿ ಹೇಮಾನಂದೀಶ್, ಸಹ ಕಾರ್ಯದರ್ಶಿ ಮೀನಾ ಮೈಸೂರು, ಖಜಾಂಚಿ ಪ್ರೊ.ಸ.ನ. ಗಾಯತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net