ಸುಗಮ ಸೇವೆ ಸಿಗಲಿ; ಕುಂದುಕೊರತೆ ಅರ್ಜಿ ಇತ್ಯರ್ಥಕ್ಕೆ 30 ದಿನ ಗಡುವು..

Editorial
Published on

ಸಾರ್ವಜನಿಕ ಕುಂದುಕೊರತೆ ಅರ್ಜಿಗಳ ವಿಲೇವಾರಿಗಿರುವ ಕಾಲಾವಕಾಶವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಈ ಮೊದಲಿದ್ದ 45 ದಿನಗಳ ಕಾಲಾವಕಾಶವನ್ನು ಈಗ 30 ದಿನಗಳಿಗೆ ಕಡಿತಗೊಳಿಸಲಾಗಿದೆ ಎಂದು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ (ಡಿಎಆರ್​ಪಿಜಿ) ತಿಳಿಸಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಯ ಕೇಂದ್ರ ಸಚಿವಾಲಯ ವ್ಯಾಪ್ತಿಯ ಡಿಎಆರ್​ಪಿಜಿ ಕಳೆದ ವರ್ಷ ಈ ಅವಧಿಯನ್ನು 60 ದಿನಗಳಿಂದ 45 ದಿನಗಳಿಗೆ ಕಡಿತಗೊಳಿಸಿತ್ತು. ಈಗ ಗಡುವನ್ನು 30 ದಿನಗಳಿಗೆ ತಗ್ಗಿಸಿರುವುದು ಸ್ವಾಗತಾರ್ಹ ಕ್ರಮ.

ದಾಖಲಾದ ದೂರು ವಿಲೇವಾರಿಯಾದರೆ ಅದಕ್ಕೆ ಪರಿಹಾರ ಸಿಕ್ಕಿದೆ ಎಂದು ಪರಿಗಣಿಸಲಾಗುವುದು. ಮೇಲ್ಮನವಿ ಸಲ್ಲಿಕೆಯಾದರೆ ಅದು ಇತ್ಯರ್ಥವಾದ ನಂತರವೇ ದೂರು ಪರಿಸಮಾಪ್ತಿ ಎಂದು ಪರಿಭಾವಿಸಲಾಗುವುದು. 30 ದಿನಗಳ ಒಳಗಾಗಿ ವಿಲೇವಾರಿ ಸಾಧ್ಯವಾಗದಿದ್ದರೆ, ಅದಕ್ಕೆ ಸಕಾರಣವನ್ನು ದೂರುದಾರರಿಗೆ ತಿಳಿಸಲಾಗುವುದು ಎಂದು ಅದು ಸ್ಪಷ್ಟನೆ ನೀಡಿದೆ. ಸರ್ಕಾರಿ ಕಚೇರಿಗಳಲ್ಲಿ ತಾವು ಎದುರಿಸುವ ಅನನುಕೂಲ ಹಾಗೂ ಸಮಸ್ಯೆಗಳ ಬಗೆಗೆ ಸಾರ್ವಜನಿಕರು ಕೇಂದ್ರೀಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಹಾಗೂ ನಿಗಾ ವ್ಯವಸ್ಥೆ (ಸಿಪಿಜಿಆರ್​ಎಎಂಎಸ್) ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಿಪಿಜಿಆರ್​ಎಎಂಎಸ್ ಒಂದು ಆನ್​ಲೈನ್ ವೇದಿಕೆಯಾಗಿದೆ. ಯಾವುದೇ ಸರ್ಕಾರಿ ಸೇವೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಈ ವ್ಯವಸ್ಥೆ ಮೂಲಕ ಅಧಿಕಾರಿಗಳಿಗೆ ದೂರುಗಳನ್ನು ದಾಖಲಿಸಬಹುದು. ದಿನದ 24 ಗಂಟೆಗಳ ಕಾಲವೂ ಇದು ಕಾರ್ಯನಿರ್ವಹಿಸುತ್ತದೆ. ಭಾರತ ಸರ್ಕಾರ ಹಾಗೂ ಎಲ್ಲ ರಾಜ್ಯಗಳ ಸಚಿವಾಲಯ ಮತ್ತು ಇಲಾಖೆಗಳಿಗೆ ಸಂಪರ್ಕ ಹೊಂದಿರುವ ಏಕೈಕ ಪೋರ್ಟಲ್ ಇದಾಗಿದೆ.

ಸರ್ಕಾರಿ ಕಚೇರಿಗಳೆಂದರೆ ಕೆಂಪುಪಟ್ಟಿ ಹಾಗೂ ಭ್ರಷ್ಟಾಚಾರಗಳ ಪ್ರತೀಕ ಎಂಬಂತಾಗಿರುವ ಈ ದಿನಗಳಲ್ಲಿ ಕೇಂದ್ರದ ಇಲಾಖೆಯು ದೂರುಗಳ ನಿವಾರಣೆಗೆ ಕಾಲಮಿತಿ ಕಡಿತಗೊಳಿಸಿರುವುದು ತಂತ್ರಜ್ಞಾನವನ್ನು ಬಳಸಿಕೊಂಡು ಹಾಗೂ ಇ- ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡು ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಪ್ರಯತ್ನದ ದ್ಯೋತಕವಾಗಿ ಗೋಚರಿಸುತ್ತದೆ.

ಈ ವರ್ಷದ ಜನವರಿಯಿಂದ ಮಾರ್ಚ್​ವರೆಗೆ ಸ್ವೀಕರಿಸಲಾದ 13,32,567 ದೂರುಗಳ ಪೈಕಿ 4,18,451 ಅರ್ಜಿಗಳನ್ನು ಈ ಇಲಾಖೆಯಿಂದ ವಿಲೇವಾರಿ ಮಾಡಲಾಗಿದೆ. 2021ರಲ್ಲಿ 30 ಲಕ್ಷ ಪೈಕಿ 21 ಲಕ್ಷ; 2020ರಲ್ಲಿ 33 ಲಕ್ಷ ಪೈಕಿ 23 ಲಕ್ಷ ಹಾಗೂ 2019ರಲ್ಲಿ 27 ಲಕ್ಷ ಪೈಕಿ 16 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ದೇಶದ ಯಾವುದೇ ಭಾಗದಲ್ಲಿರುವ ಪ್ರಜೆಯು ಸರ್ಕಾರಿ ಸೇವೆಗಳಲ್ಲಿ ತನಗೆ ಎದುರಾಗುವ ಸಮಸ್ಯೆಗಳ ಬಗೆಗೆ ದೂರು ದಾಖಲಿಸಲು ಸುಲಭವಾದ ಹಾಗೂ ತಕ್ಕಮಟ್ಟಿಗೆ ಪರಿಣಾಮಕಾರಿಯಾದ ಸಾಧನ ಇದಾಗಿದೆ ಎಂಬುದನ್ನು ಈ ಅಂಕಿ-ಅಂಶಗಳು ಸೂಚಿಸುತ್ತವೆ.

ಇನ್ನೊಂದೆಡೆ, ಮಾಹಿತಿ ಹಕ್ಕು (ಆರ್​ಟಿಐ) ಕಾಯ್ದೆಯಡಿ ವ್ಯಕ್ತಿಯೊಬ್ಬರು ಕೋರಿದ್ದ ಮಾಹಿತಿ ಒದಗಿಸಲು 2 ವರ್ಷ ವಿಳಂಬ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ 35 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಒಟ್ಟಿನಲ್ಲಿ, ಜನರಿಗೆ ಸಕಾಲದಲ್ಲಿ ಮತ್ತು ಪಾರದರ್ಶವಾಗಿ ಸೇವೆ ನೀಡುವುದು ಸರ್ಕಾರಿ ವ್ಯವಸ್ಥೆಯ ಕರ್ತವ್ಯ ಮತ್ತು ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬೇಕಾದುದು ಅವಶ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net