

ಗಂಗಾಧರ್ ಬೈರಾಪಟ್ಟಣ ರಾಮನಗರ ಗರ್ಭಿಣಿಯರಿಗೆ ಹಿಂದು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡು ಬಂದಿದೆ. ಆದರೆ, ಕಾರ್ಯಕ್ರಮ ಆಯೋಜನೆಗೆ ನೀಡುತ್ತಿರುವ ಅನುದಾನ ಮಾತ್ರ ತಲೆತಗ್ಗಿಸುವಂತಿದ್ದು, ಲಭ್ಯ ಅತ್ಯಲ್ಪ ಹಣದಲ್ಲಿಯೇ ಅಂಗನವಾಡಿಗಳಲ್ಲಿ ಸೀಮಂತ ಶಾಸ್ತ್ರ ಮುಗಿಸುವ ಕಾಟಾಚಾರದ ಕೆಲಸ ನಡೆಯುತ್ತಿದೆ. ಕೇಂದ್ರ ಸರ್ಕಾರ ಗರ್ಭಿಣಿಯರ ಆರೋಗ್ಯ ಮತ್ತು ಆರೋಗ್ಯವಂತ ಮಗು ಜನನಕ್ಕೆ ಹೆಚ್ಚು ಒತ್ತು ಕೊಟ್ಟು ಪೋಷಣ್ ಅಭಿಯಾನ ಹಮ್ಮಿಕೊಂಡಿದೆ. ಇದಕ್ಕಾಗಿ ಪ್ರತಿ ತಿಂಗಳ ಮೊದಲ ಶುಕ್ರವಾರ ಮತ್ತು 3ನೇ ಶುಕ್ರವಾರ ಪೋಷಣ್ ಅಭಿಯಾನದಡಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದ್ದು, ಸೀಮಂತ ಶಾಸ್ತ್ರವೂ ಇದರ ಒಂದು ಭಾಗ. ಪ್ರತಿ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ಗರ್ಭಿಣಿಯರನ್ನು ಗುರ್ತಿಸಿ ಅವರಿಗೆ ಸೀಮಂತ ಶಾಸ್ತ್ರ ಸೇರಿದಂತೆ ಪೌಷ್ಟಿಕ ಆಹಾರ ಬಳಕೆ, ಆರೋಗ್ಯ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆದರೆ, ಸೀಮಂತ ಶಾಸ್ತ್ರಕ್ಕೆ ಕೊಡುವ ವೆಚ್ಚ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಕೇವಲ 50 ರೂಪಾಯಿಗಳಲ್ಲಿ ಪ್ರತಿ ಗರ್ಭಿಣಿಯ ಸೀಮಂತ ಶಾಸ್ತ್ರ ಮುಗಿಸಬೇಕಿದೆ. ಏನೂ ಬರಲ್ಲ: ಸೀಮಂತ ಶಾಸ್ತ್ರದ ವೇಳೆ ಗರ್ಭಿಣಿಗೆ ಒಂದು ರವಿಕೆ ಕಣ, ಹೂವು, ಅರಿಶಿಣ ಕುಂಕುಮ, ಒಂದು ಡಜನ್ ಬಳೆ, ಹುಡಿ ತುಂಬಲು ಹಣ್ಣು, ಕೊಬ್ಬರಿ ಬೆಲ್ಲ ಹೀಗೆ ಎಲ್ಲವನ್ನೂ ನೀಡಲಾಗುತ್ತದೆ. ಇದರ ಜತೆಗೆ ಗರ್ಭಿಣಿಯನ್ನು ಹೇಗೆ ಪಾಲನೆ ಮಾಡಬೇಕು ಎನ್ನುವ ಅರಿವು ಮೂಡಿಸಲು ಆಕೆಯ ಪತಿ, ಅತ್ತೆ, ಮಾವ, ಅಪ್ಪ, ಅಮ್ಮ ಹೀಗೆ ಸುಮಾರು 10ಕ್ಕೂ ಹೆಚ್ಚು ಮಂದಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಬಂದವರಿಗೆ ಲಘು ಉಪಹಾರ ವ್ಯವಸ್ಥೆ ಸಹ ಇದೇ ಹಣದಲ್ಲಿ ಮಾಡಬೇಕಿದೆ. ಆದರೆ, ಸರ್ಕಾರದ ಸೂಚನೆ ಪಾಲಿಸಲೇಬೇಕಿರುವ ಅಂಗವನಾಡಿ ಕಾರ್ಯಕರ್ತೆಯರು, ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಸೀಮಂತ ಶಾಸ್ತ್ರ ಮಾಡಿ ಮುಗಿಸುತ್ತಿದ್ದಾರೆ. ಕೋವಿಡ್ ಆರಂಭಕ್ಕೂ ಮುನ್ನ ತಮ್ಮ ವ್ಯಾಪ್ತಿಯಲ್ಲಿ ಎಷ್ಟೇ ಮಂದಿ ಗರ್ಭಿಣಿಯರಿದ್ದರೂ ಅವರಿಗೆ ಸೀಮಂತ ಶಾಸ್ತ್ರವನ್ನು ಸಾಮೂಹಿಕವಾಗಿ ಮಾಡಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಕೇವಲ 10 ಮಂದಿಗೆ ಮಾತ್ರ ಸೀಮಂತ ಮಾಡಬೇಕಿದ್ದು, ಕೊಡುವ ಹಣ ಯಾವುದಕ್ಕೂ ಸಾಲದು ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು. ಜನವರಿಯಲ್ಲಿ 1423 ಗರ್ಭಿಣಿಯರಿಗೆ ಸೀಮಂತ: ಜಿಲ್ಲೆಯಲ್ಲಿ ಕಳೆದ ಜನವರಿಯಲ್ಲಿ ಒಟ್ಟು 1423 ಗರ್ಭಿಣಿಯರಿಗೆ ಸೀಮಂತ ಮಾಡಲಾಗಿದೆ. ಚನ್ನಪಟ್ಟಣ ತಾಲೂಕಿನಲ್ಲಿ 268, ಕನಕಪುರದಲ್ಲಿ 335, ಮಾಗಡಿಯಲ್ಲಿ 366, ರಾಮನಗರ ತಾಲೂಕಿನಲ್ಲಿ 332 ಮತ್ತು ಮರಳವಾಡಿ ವ್ಯಾಪ್ತಿಯಲ್ಲಿ 122 ಮಂದಿಗೆ ಸೀಮಂತ ಮಾಡಲಾಗಿದೆ. ಸೀಮಂತದ ಹೆಸರಲ್ಲಿ ಅರಿವು ಆದರೆ, ಈ ಬಗ್ಗೆ ಬೇರೆಯದೇ ವ್ಯಾಖ್ಯಾನ ನೀಡುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸೀಮಂತದ ಹೆಸರಲ್ಲಿ ಗರ್ಭಿಣಿಯರಿಗೆ ಹಾಗೂ ಮಗುವಿನ ಆರೋಗ್ಯ ಕಾಳಜಿ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಮೂಲಕ ಆರೋಗ್ಯವಂತ ಮಗುವಿನ ಜನನಕ್ಕೆ ಸಹಕಾರಿಯಾಗುವಂತೆ ಮಾಡಲಾಗುತ್ತದೆ. ಆದರೆ ಸೀಮಂತ ಶಾಸ್ತ್ರದಲ್ಲಿ ಇಂಥದ್ದೇ ಕೊಡಬೇಕು ಎಂದೇನು ಇಲ್ಲ. ಸರ್ಕಾರದಿಂದ ಕೊಡುವ ಪೌಷ್ಟಿಕ ಆಹಾರ ಮತ್ತು ಔಷಧಗಳನ್ನು ಕಾಲಕಾಲಕ್ಕೆ ವಿತರಣೆ ಮಾಡಲಾಗುತ್ತದೆ ಎನ್ನುತ್ತಾರೆ. ಅನುದಾನ ಹೆಚ್ಚಿಸಬೇಕಿದೆ ಕೆಲವೊಮ್ಮೆ ಅಂಗನವಾಡಿಯಲ್ಲಿ ಸೀಮಂತ ಶಾಸ್ತ್ರವನ್ನು ಅಚ್ಚುಕಟ್ಟಾಗಿ ಮಾಡಬೇಕು ಎನ್ನುವ ಕಾರಣಕ್ಕೆ ಕಾರ್ಯಕರ್ತೆಯರು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರ ಸಹಾಯ ಪಡೆದುಕೊಂಡ ಉದಾಹರಣೆಗಳು ಇವೆ. ಇನ್ನೂ ಕೆಲವು ಕಡೆಗಳಲ್ಲಿ ಪ್ರಸ್ತುತ ಪ್ರತಿ ಮೊದಲ ಹಾಗೂ ಮೂರನೇ ಶುಕ್ರವಾರಕ್ಕೆ ಬರುವ ಹಣ ಸಂಗ್ರಹಿಸಿ ಇಟ್ಟುಕೊಂಡು, ಅಂಗನವಾಡಿಯಲ್ಲಿ ದೊರೆಯುವ ಆಹಾರ ಸಾಮಗ್ರಿಗಳನ್ನು ಬಳಸಿ ಸೀಮಂತ ಶಾಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೀಮಂತ ಶಾಸ್ತ್ರವನ್ನು ಮತ್ತಷ್ಟು ಅರ್ಥ ಪೂರ್ಣಗೊಳಿಸಲು ಹೆಚ್ಚಿನ ಅನುದಾನ ಬೇಕು ಎನ್ನುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರು.
ಪೋಷಣ್ ಅಭಿಯಾನದಲ್ಲಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಉಡಿ ತುಂಬುವ ಶಾಸ್ತ್ರಕ್ಕಿಂತ ಹೆಚ್ಚಾಗಿ ಸೀಮಂತದ ಹೆಸರಲ್ಲಿ ಗರ್ಭಿಣಿಯರು ಹೇಗೆ ತಮ್ಮ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವ ಅರಿವು ಮೂಡಿಸಲಾಗುತ್ತದೆ. ಸೀಮಂತ ಶಾಸ್ತ್ರಕ್ಕೆ 50 ರೂ. ನೀಡಲಾಗುತ್ತಿದೆ. ಸಿ.ವಿ.ರಾಮನ್‌ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಮನಗರ ಸೀಮಂತ ಶಾಸ್ತ್ರ ಗರ್ಭಿಣಿಯರಿಗೆ ಭಾವನಾತ್ಮಕ ವಿಚಾರ. ಸರ್ಕಾರ ಕೊಡುವ 50 ರೂ. ಅನುದಾನದಲ್ಲಿ ಕೈಲಾದ ಮಟ್ಟಿಗೆ ಸೀಮಂತ ಮಾಡುತ್ತಿದ್ದೇವೆ. ಈ ಹಣ ಯಾವುದಕ್ಕೂ ಸಾಲದಾಗಿದೆ. ಇದನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆ