ಸಿರಿಧಾನ್ಯ ಬಳಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ / ಮಧುಮೇಹ ಖಾಯಿಲೆಗಳನ್ನು ಗುಣಪಡಿಸಿಕೊಳ್ಳಿ / ಅಪರ ಜಿಲ್ಲಾಧಿಕಾರಿ ಮಂಗಳ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸಿರಿಧಾನ್ಯಗಳಾದ ರಾಗಿ, ಉರ್ಲು, ಹಾರಕ, ಬರಗು, ಆರ್ಕ ಮುಂತಾದ ಸಾವಯವ ಧಾನ್ಯಗಳ ನಿರಂತರ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸಿರಿಧಾನ್ಯಗಳಲ್ಲಿ ಅಗ್ರಸ್ಥಾನದ ಬಳಕೆಯಲ್ಲಿರುವ ರಾಗಿಯ ಧಾನ್ಯಗಳ ಬಳಕೆಯು ಮಧುಮೇಹ ಕಾಯಿಲೆ ಗುಣಪಡಿಸಲು ಸಹಕಾರಿಯಾಗಿದೆ ಎಂದು ಎಂದು ಅಪರ ಜಿಲ್ಲಾಧಿಕಾರಿ ಮಂಗಳ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ ಇವರ ಸಂಯುಕ್ತ ಆಶಯದಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶೇಷ ಖಾದ್ಯಗಳೊಂದಿಗೆ ಅತ್ಯುತ್ಸಾಹದಿಂದ ಪಾಲ್ಗೊಂಡು, ವಿವಿಧ ಸಾವಯವ ಸಿರಿಧಾನ್ಯಗಳಿಂದ ತಯಾರಿಸಲಾದ ಖಾದ್ಯಗಳು ಮನಸೆಳೆದವು. ಅವುಗಳಲ್ಲಿ ನವಣೆಪಲಾವ್, ಚಿನ್ನಕುರುಳಿ, ಮಾಲ್ಟ್, ರಾಗಿ ಒತ್ತುಶಾವಿಗೆ, ರಾಗಿ ಹಲ್ವ, ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ಒತ್ತುಶಾವಿಗೆ ಕಾಯಿರಸ, ಸಜ್ಜೆರೊಟ್ಟಿ, ಕುಂಬಳಕಾಯಿ ಕಡಬು, ರಾಗಿ ಕಿಚಡಿ, ನವಣೆ ಸಿಹಿ ಪೊಂಗಲ್, ಸಿರಿಧಾನ್ಯ ಹಲ್ವ, ರಾಗಿ ದೋಸೆ, ನವಣಕ್ಕಿ ತಂಬಿಟ್ಟು, ರಾಗಿ ಬೆಲ್ಲದ ಬರ್ಫಿ, ಸಾಮೆ ಬಿಸಿ ಬೇಳೆಬಾತ್, ನವಣಕ್ಕಿ ಚಕ್ಕುಲಿ ಸೇರಿದಂತೆ ಸುಮಾರು ೫೦ ಕ್ಕೂ ಹೆಚ್ಚು ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಿಕೊಂಡು ಸ್ಪರ್ದೆಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಎಲ್ಲ ಖಾದ್ಯಗಳನ್ನು ರುಚಿ ನೋಡಿ ಧೀರ್ಘಕಾಲಿನ ಆರೋಗ್ಯಕ್ಕೆ ಇಂತಹ ಸಿರಿಧಾನ್ಯ ಬಳಕೆಯು ತುಂಬ ಸಹಕಾರಿಯಾಗಿದೆ. ರಾಗಿ ಹಾಗೂ ಸಾವಯವ ಸಿರಿಧಾನ್ಯಗಳು ಮಧುಮೇಹದಂತಹ ಕಾಯಿಲೆ ಗುಣಪಡಿಸಲು ಅತ್ಯುತ್ತಮ ಆಹಾರ ಪದ್ದತಿಯಾಗಿದೆ. ಆದ್ದರಿಂದ ಮಧುಮೇಹಿಗಳು ಸಿರಿಧಾನ್ಯಗಳ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳನ್ನು ಹೆಚ್ಚಾಗಿ ಬಳಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರವರು ಮಾತನಾಡಿ, ರಾಗಿ ತಿಂದವನು ನಿರೋಗಿ ಎಂಬ ಮಾತು ಹೆಚ್ಚು ಜನಜನಿತವಾಗಿದೆ. ಕೋಲಾರ ಭಾಗದಲ್ಲಿಯೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ರೈತರು ಮುಂದಾಗಬೇಕು. ಸಿರಿಧಾನ್ಯಗಳಿಂದ ತಯಾರಾಗುವ ಪಾಯಸ ಲಡ್ಡು, ರಾಗಿ ಮುದ್ದೆ, ಚಕ್ಕುಲಿ, ಶಾವಿಗೆ ಇನ್ನಿತರ ಖಾದ್ಯಗಳನ್ನು ಎಲ್ಲರು ಬಳಸುವ ಮೂಲಕ ಸ್ವಾಸ್ಥ್ಯ ಹಾಗೂ ಆರೋಗ್ಯಕರ ಸಮಾಜ ಸೃಷ್ಟಿಸಬೇಕು ಎಂದರು.

ಇಂದು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿ, ಹಿಂದಿನ ಕಾಲದಲ್ಲಿ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿದ್ದರಿಂದ ಅವರು ದಷ್ಟಪುಷ್ಟರಾಗಿ ದೃಢಕಾಯರಾಗಿದ್ದರು. ಉತ್ತಮ ಆರೋಗ್ಯವನ್ನು ಹೊಂದಿದ್ದರು. ಆದರೆ ಕಾಲಾ ನಂತರದಲ್ಲಿ ಸಿರಿಧಾನ್ಯಗಳ ಬಳಕೆಯ ಆಹಾರದ ಕ್ರಮದಲ್ಲಿ ಕಡಿಮೆಯಾಯಿತು. ಒತ್ತಡದ ಆಧುನಿಕ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳಿಂದ ತುತ್ತಾಗುತ್ತಿರುವ ಈ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಮಾ ಮಾತನಾಡಿ, ಸಿರಿಧಾನ್ಯಗಳ ಕೃಷಿ ಪದ್ಧತಿಯು ಅತಿ ಪ್ರಾಚೀನ ಪದ್ಧತಿಯಾಗಿದೆ. ಎಷ್ಟೋ ಸಿರಿಧಾನ್ಯಗಳ ಬಳಕೆಯು ಕಡಿಮೆಯಾಗಿದ್ದು, ಅಳಿವಿನಂಚಿಗೆ ಸಾಗುವಂತಾಗಿದೆ. ಸಿರಿಧಾನ್ಯಗಳಲ್ಲಿ ವಿಟಮಿನ್, ಪ್ರೋಟೀನುಗಳು ಹಾಗೂ ಇತರ ಪೋಷಕಾಂಶಗಳಿವೆ. ಈ ಬೆಳೆಗಳು ಪರಿಸರ ಸ್ನೇಹಿಯಾಗಿದ್ದು, ಕಡಿಮೆ ಮಳೆ ಬರುವ ಹಾಗೂ ಕಡಿಮೆ ಫಲವತ್ತತೆಯುಳ್ಳ ಪ್ರದೇಶಗಳಲ್ಲಿ ಬೆಳೆಯಬಹುದು. ಈ ಸಿರಿ ಧಾನ್ಯಗಳ ಮಹತ್ವವನ್ನು ಎಲ್ಲರೂ ಅರಿತು ತಮ್ಮ ಆಹಾರ ಕ್ರಮದಲ್ಲಿ ಸಿರಿಧಾನ್ಯಗಳ ಖ್ಯಾದಗಳನ್ನು ಬಳಸುವಂತೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ, ರೇಷ್ಮೆ ಉಪನಿರ್ದೇಶಕರಾದ ಶ್ರೀನಿವಾಸ್, ಕೃಷಿ ಇಲಾಖೆಯ ಉಪನಿರ್ದೇಶಕಿ ಭವ್ಯರಾಣಿ, ಉಪ ನಿರ್ದೇಶಕ ನಾಗರಾಜ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಶಿವಾನಂದ ಹೊಂಗಲ್ ವಿ.ವಿಯ ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿದಂತೆ ಮತಿತ್ತರರು ಉಪಸ್ಥಿತರಿದರು.

ಚಿತ್ರ ೨೨ ಕೆ.ಎಲ್.ಆರ್. ೦೮ : ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದು, ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳನ್ನು ಪ್ರದರ್ಶನಕ್ಕೆ ಇಡಲಾಗಿರುವುದು.

ಚಿತ್ರ ೨೨ ಕೆ.ಎಲ್.ಆರ್. ೦೮ಎ : ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಮಂಗಳ, ಕೃಷಿ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net