

ಚಿತ್ರದುರ್ಗ: ತಾಲೂಕಿನ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ 2021ರಿಂದ ಹಾಕಲಾಗಿದ್ದ ಮಧ್ಯಂತರ ಅರ್ಜಿಗಳ ಪೈಕಿ ಮತ್ತೆ ನಾಲ್ಕು ಅರ್ಜಿಯನ್ನು ಖರ್ಚು ಸಮೇತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.
ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ಶ್ರೀಮಠಕ್ಕೆ ಸಂಬಂಧಿಸಿದ ಟ್ರಸ್ಟ್ ಡೀಡ್ ವಿಚಾರಣೆಯನ್ನು ಏ. 19ಕ್ಕೆ ಮುಂದೂಡಲಾಗಿದೆ.
ಪ್ರಕರಣ ದಾಖಲಾಗಿ ಒಂದರ ಮೇಲೆ ಮತ್ತೊಂದರಂತೆ ಹಾಕಲಾಗಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಾಲಯ ಈವರೆಗೂ 17 ಅರ್ಜಿ ವಜಾಗೊಳಿಸಿದ್ದು, ಬಾಕಿ ಉಳಿದಿದ್ದ ಐದರಲ್ಲಿ ಮತ್ತೆ ನಾಲ್ಕನ್ನು ವಜಾಗೊಳಿಸಿದೆ.
ಶ್ರೀಮಠದ ಈಗಿನ ಶ್ರೀಗಳು ಉತ್ತರಾಧಿಕಾರಿ ನೇಮಕ ಸಂಬಂಧ ಸಮಿತಿ ರಚಿಸಬಾರದು. ಟ್ರಸ್ಟ್ ಡೀಡ್ ಅಧಿಕಾರ ಚಲಾಯಿಸಬಾರದು. ಭಕ್ತರ ಸಭೆ ಕರೆಯಬಾರದು. ಶ್ರೀಮಠದ ಕಾರ್ಯಚಟುವಟಿಕೆ ನಡೆಸಬಾರದೆಂದು ಹಿರೇಕೆರೂರಿನ ಎಸ್.ಎಸ್.ಪಾಟೀಲ್, ಬಿ.ಎಚ್.ಮಂಜಪ್ಪ, ಎಂ.ಶಿವಕುಮಾರ ಸ್ವಾಮಿ, ಸುಭಾಷ್‌ಚಂದ್ರ, ಡಾ.ಜಿ.ಎಂ.ಲಿಂಗರಾಜು, ಟಿ.ಪಿ.ಕಲ್ಲೇಶ್, ಪಿ.ಕಾಂತರಾಜ್, ಡಾ.ಎಚ್.ಕರಿಬಸಪ್ಪ, ಎಸ್.ಶಿವಕುಮಾರ್ ಮಾಳಿಗೆ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಗೊಂಡಿದೆ.
ಎಸ್.ಎಸ್.ಪಾಟೀಲ್ ಸೇರಿ ಒಂಬತ್ತು ಮಂದಿಯ ಪರವಾಗಿ ವಕೀಲ ಕೆ. ಶ್ರೀಕಾಂತ್ ಪಾಟೀಲ್ ವಾದ ಮಂಡಿಸಿದ್ದರು. ಶ್ರೀಮಠದ ಪರ ಜಿ.ಬಿ.ಸೋಮಶೇಖರಪ್ಪ ಪ್ರತಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸ್ವಾಮೀಜಿ ವಿರುದ್ಧ ಮಾಡಿರುವ ಆರೋಪಗಳಲ್ಲಿ ಬಲವಾದ ಸಾಕ್ಷಾೃಧಾರಗಳಿಲ್ಲದ ಕಾರಣ ಮಧ್ಯಂತರ ಅರ್ಜಿಗಳನ್ನು ವಜಾಗೊಳಿಸಿದೆ.
ಅಲ್ಲದೆ, ಪ್ರಕರಣ ಸಂಬಂಧ ನೂರಾರು ಭಕ್ತರು ಶ್ರೀಮಠ, ಸ್ವಾಮೀಜಿ ಪರ ನಿಂತು ಮಠದ ಜತೆಗೆ ತಮ್ಮನ್ನು ಪ್ರತಿವಾದಿಗಳನ್ನಾಗಿ ಮಾಡಿಕೊಳ್ಳಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕೋರ್ಟ್ ಕೂಡ ಸಮ್ಮತಿಸಿತ್ತು. ಇದನ್ನು ಪ್ರಶ್ನಿಸಿ, ಒಂಬತ್ತು ಮಂದಿ ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಅದು ಕೂಡ ಉಚ್ಛ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ ಎಂದು ಶ್ರೀಮಠ ತಿಳಿಸಿದೆ.
ಟ್ರಸ್ಟ್ ಡೀಡ್ ವಿಚಾರಣೆ ಹಂತದಲ್ಲಿ: ಸ್ವಾಮೀಜಿ ಅವರು 1990ರಲ್ಲಿ ಯಾರಿಗೂ ಗೊತ್ತಾಗದ ರೀತಿ ಬಚ್ಚಿಟ್ಟು, ಕತ್ತಲೆಯಲ್ಲಿಟ್ಟು ಟ್ರಸ್ಟ್ ಡೀಡ್ ಅನ್ನು ನೋಂದಾಯಿಸಿದ್ದಾರೆ. ಇದರಲ್ಲಿ ಸ್ವಾರ್ಥವಿದೆ ಎಂದು ಎಸ್.ಎಸ್.ಪಾಟೀಲ್ ಸೇರಿ ಒಂಬತ್ತು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ಹಂತದಲ್ಲಿದೆ. ಈ ಸಂಬಂಧ ವಾದ ಪ್ರತಿವಾದಗಳು ಮುಂದುವರಿದಿವೆ.
ಅರ್ಜಿ ವಜಾ ವೇಳೆ ಶ್ರೀಮಠದ ಮತ್ತೋರ್ವ ವಕೀಲ ಕೆ.ಇ.ಉಮೇಶ್ ಸಿಂಗಾಪುರ ಇದ್ದರು.