ಸಿಮೆಂಟ್ ಕಾಮಗಾರಿಗೆ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಭೂಮಿ ಪೂಜೆ

IMG_20201123_100748
Published on

ಗೌರಿಬಿದನೂರು : ಯುವಕರಿಗೆ ವೃತ್ತಿ ಆಧಾರಿತ ತರಬೇತಿ ನೀಡಿದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪರಿಹಾರ ದೊರೆಯಲಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ತಾಲೂಕಿನ ಕುಡುಮಲಕುಂಟೆ ಜಿಟಿಡಿಸಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅಂದಾಜು 4.5 ಕೋಟಿ ರೂ. ವೆಚ್ಚದ ಸಿಬ್ಬಂದಿ ವಸತಿ ಗೃಹ, ವಿದ್ಯಾರ್ಥಿ ವಸತಿ ನಿಲಯ ಹಾಗೂ ಸಿಮೆಂಟ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,ಯುವಕರಿಗೆ ಕೊರತೆ ಇಲ್ಲ. ಆದರೆ ತಾಂತ್ರಿಕ ಶಿಕ್ಷಣದ ಕೊರತೆ ಇದೆ. ಈ ತರಬೇತಿ ಕೇಂದ್ರದಲ್ಲಿ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡಿ ಕಾರ್ಮಿಕರನ್ನು ಸೃಷ್ಟಿಸುವ ಕೆಲಸ ಮಾಡಲಾಗುವುದು. ಇದರಿಂದ ಹೆಚ್ಚಿನ ಯುವಕರಿಗೆ ಉದ್ಯೋಗ ದೊರೆಯಲಿದ್ದು, ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಈ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸುವಂತೆ ಕೈಗಾರಿಕಾ ಸಚಿವರಿಗೆ ಮನವಿ ಮಾಡುತ್ತೇನೆ. ಕೈಗಾರಿಕಾ ಪ್ರದೇಶಕ್ಕೆ ಅವಶ್ಯಕವಿರುವ ನೀರನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ನಗರದ ಉತ್ತರ ಪಿನಾಕಿನಿ ನದಿಗೆ ಬರುವ ಎಚ್.ಎನ್ ವ್ಯಾಲಿ ನೀರನ್ನು ಕಲ್ಲೂಡಿ, ಗೋಟಕನಾಪುರ, ಗಂಗಸಂದ್ರ ಕೆರೆಗಳ ಮೂಲಕ ಕುಡುಮಲಕುಂಟೆ, ದೊಡ್ಡ ಕುರುಗೋಡು ಕೆರೆಗೆ ಹರಿಸಲಾಗುವುದು. ಅಲ್ಲಿಂದ ಕೈಗಾರಿಕೆಗಳಿಗೆ ನೀರು ಒದಗಿಸಲಾಗುವುದು ಎಂದು ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎಂ.ಪ್ರಕಾಶ್ ರೆಡ್ಡಿ ಮಾತನಾಡಿ, ಶಾಸಕರ ದೂರದೃಷ್ಟಿಯಿಂದ ತಾಲೂಕಿನಲ್ಲಿ ಹತ್ತಾರು ಕೈಗಾರಿಕೆಗಳು ತಲೆಯೆತ್ತಿವೆ. ಸಾವಿರಾರು ಮಹಿಳೆಯರಿಗೆ ಕೆಲಸ ದೊರೆತಿದೆ. ತಾಲೂಕಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವ ಶಾಸಕರ ಕೈಬಲಪಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net