

ಮೈಸೂರು: ಸಿನಿಮಾ ಕ್ಷೇತ್ರವೆಂಬುದು ವಿಪುಲ ಆಯ್ಕೆಗಳಿರುವ ಕ್ಷೇತ್ರ. ಪ್ರತಿಭೆಗೆ, ಪರಿಶ್ರಮಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತಾ ಹೋಗುತ್ತವೆ ಎಂದು ನಟ ಹಾಗೂ ನಿರ್ಮಾಪಕ ಡಾಲಿ ಧನಂಜಯ ಹೇಳಿದರು.
ಅಮೃತ ವಿಶ್ವವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಿನಿರಮಾ-2023’ ರಾಷ್ಟ್ರೀಯ ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಚಿತ್ರರಂಗದಲ್ಲಿ ಆಸಕ್ತಿಯಿರುವ ಯಾರೇ ಆದರೂ ವಿವಿಧ ಅವಕಾಶ ಸಿಕ್ಕಂತೆ ಅವುಗಳನ್ನು ಸದುಪಯೋಗಪಡಿಸಬೇಕು. ಇಂಥದ್ದೇ ಪಾತ್ರ ಬೇಕು ಎಂದು ಕಾಲ ಕಳೆದರೆ ಸಿಗಬಹುದಾದ ಸುವರ್ಣಾವಕಾಶ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಸಾಮರ್ಥ್ಯ ಸಾಬೀತುಪಡಿಸಬಹುದಾದ ಯಾವುದೇ ಸಂದರ್ಭ ಬಂದರೂ ಅದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.
ತಮ್ಮ ವೃತ್ತಿ ಜೀವನದ ನಿದರ್ಶನ ನೀಡಿದ ಧನಂಜಯ್, ನಾನು ಈಗಿರುವ ಹಂತವನ್ನು ತಲುಪಲು ನಾನು ನಿರ್ವಹಿಸಿದ ಎಲ್ಲ ಪಾತ್ರಗಳೂ ದೊಡ್ಡ ಅಡಿಪಾಯ ಸೃಷ್ಟಿಸಿವೆ ಎಂದು ತಿಳಿಸಿದರು.
ಚಿತ್ರ ನಿರ್ಮಾಣದಲ್ಲಿ ಆಸಕ್ತಿಯಿರುವ ಯುವ ಜನತೆಗೆ ತಮ್ಮ ಅನುಭವ ಮೂಲಕ ಸಲಹೆ ನೀಡಿದ ಡಾಲಿ ಧನಂಜಯ್, ಇಂದಿನ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅಭಿವೃದ್ಧಿ ಒಂದು ದೊಡ್ಡ ವರದಾನ. ಇಂದು ಎಲ್ಲ ಆಯ್ಕೆ, ಸೌಲಭ, ಸಾಧ್ಯತೆ ಮೊಬೈಲ್‌ಫೋೀನ್‌ಗಳಲ್ಲಿದ್ದು, ಇಡೀ ಸಿನಿಮಾವನ್ನು ಮೊಬೈಲ್‌ನಲ್ಲೇ ಚಿತ್ರೀಕರಿಸಬಹುದಾಗಿದೆ. ಮೊಬೈಲ್ ಫೋನ್‌ಗಳು ಅತ್ಯಂತ ವಿಸ್ತಾರವಾದ ಹರವನ್ನು ಪರಿಚಯಿಸಿದ್ದು, ದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಇದು ಭದ್ರ ಬುನಾದಿಯಾಗಬಲ್ಲದು ಎಂದು ಹೇಳಿದರು.
ಮುಂಬೈನ ಸಿನಿಮಾ ಪತ್ರಕರ್ತ, ವಿಮರ್ಶಕ ಸುಚಿನ್ ಮೆಹ್ರೋತ್ರ ಅವರು ಫಿಲ್ಮ ಕ್ರಿಟಿಸಿಸಂ ಕುರಿತಾಗಿ ಗೋಷ್ಠಿ ನಡೆಸಿಕೊಟ್ಟರು. ದೇಶಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್‌ಗಳು ಭಾಗವಹಿಸಿದ್ದವು. 50ಕ್ಕೂ ಹೆಚ್ಚು ಸಿನಿಮಾಗಳು ನೋಂದಣಿಗೊಂಡಿದ್ದು, ಟಾಪ್ ಏಳು ಕಿರುಚಿತ್ರಗಳು ಪ್ರದರ್ಶನಗೊಂಡವು. ನಟ ಹಾಗೂ ಲೆನ್ಸ್ ಬೇಸ್ಡ್ ಛಾಯಾಚಿತ್ರಗ್ರಾಹಕ ಕೆ.ಜೆ.ಪವನ್ ತೀರ್ಪುಗಾರರಾಗಿದ್ದರು.
ನಗರದ ಮಲ್ಟಿಪ್ಲೆಕ್ಸ್ ಡಿಆರ್‌ಸಿ ಸಿನೆಮಾಸ್ ಮಾಲೀಕರಾದ ವೈಶಾಲಿ ಹನುಮಂತ್, ಹನುಮಂತ್, ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್, ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥ ಡಾ. ಮೌಲ್ಯ ಬಾಲಾಡಿ ಇತರರು ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತರು:
ಪ್ರಥಮ ಅತ್ಯುತ್ತಮ ಕಿರುಚಿತ್ರ - ಸಂಜಯ್ ಚಂದ್ರಶೇಖರನ್ - ಕ್ಯಾನ್‌ವಾಸ್ (ತಮಿಳು)
ದ್ವಿತೀಯ ಕಿರುಚಿತ್ರ - ಪ್ರಣವ್ ಕೃಷ್ಣನ್ - ಅಕ್ರೋಸ್ (ಮಲಯಾಳಂ)
ತೃತೀಯ ಕಿರುಚಿತ್ರ - ಸಂಪತ್ ಕುಮಾರ್ ರೈ - ಇಲಿಬೋನು (ಕನ್ನಡ)
ವಿಶೇಷ ವಿಭಾಗ ಪ್ರಶಸ್ತಿಗಳು
ಅತ್ಯುತ್ತಮ ಸಂಕಲನಕಾರ - ಶ್ರೀರಾಮ್ ರಾಮಸ್ವಾಮಿ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ನಿರ್ದೇಶಕ - ಸಂಜಯ್ ಚಂದ್ರಶೇಖರನ್ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ಛಾಯಾಗ್ರಾಹಕ - ಕಾರ್ತಿಕ್ ಸಿಪ್ಪಿ - ಕ್ಯಾನ್‌ವಾಸ್ (ತಮಿಳು)
ಅತ್ಯುತ್ತಮ ಉತ್ತಮ ನಟ - ಆದರ್ಶ್ ಕೃಷ್ಣದಾಸ್ - ಅಕ್ರೋಸ್ (ಮಲಯಾಳಂ)
ಉತ್ತಮ ನಟಿ - ಸ್ನೇಹ ರೆಜಿ - ಚೆರಿಲ್ (ಮಲಯಾಳಂ)
ಪ್ರಥಮ ಅತ್ಯುತ್ತಮ ಮೊಬೈಲ್ ಚಿತ್ರ - ಟು ಕೊಕನಟ್ - ರಿಥಿಕ್ ನಾಯರ್
ದ್ವಿತೀಯ ಅತ್ಯುತ್ತಮ ಮೊಬೈಲ್ ಚಿತ್ರ - ಹೀಲ್ ವಿಥಿನ್ - ಆದಿತ್ಯ ಯಲಿಗಾರ್