ಸಿದ್ದರಾಮಯ್ಯಗೆ ಸೋಲು ಕಟ್ಟಿಟ್ಟ ಬುತ್ತಿ; ಕಂದಾಯ ಸಚಿವ ಆರ್​.ಅಶೋಕ್​ ಹೇಳಿಕೆ

ಕೋಲಾರ ನಗರದ ಹೊರವಲಯದ ಬಿಜೆಪಿ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್​.ಅಶೋಕ್​, ಸಚಿವ ಮುನಿರತ್ನ, ಸಂಸದ ಎಸ್​.ಮುನಿಸ್ವಾಮಿ ಭಾಗಿಯಾಗಿದ್ದರು.
ಕೋಲಾರ ನಗರದ ಹೊರವಲಯದ ಬಿಜೆಪಿ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್​.ಅಶೋಕ್​, ಸಚಿವ ಮುನಿರತ್ನ, ಸಂಸದ ಎಸ್​.ಮುನಿಸ್ವಾಮಿ ಭಾಗಿಯಾಗಿದ್ದರು.
Published on

ಕೋಲಾರ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದ್ದು, ರಾಜಕೀಯದಿಂದ ನಿವೃತ್ತರಾಗಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋತು ರಾಜ್ಯವು ಕಾಂಗ್ರೆಸ್​ ಮುಕ್ತವಾಗಲಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಹೇಳಿದರು.

ನಗರ ಹೊರವಲಯದ ಕೋಗಿಲಹಳ್ಳಿಯಲ್ಲಿ ಗುರುವಾರ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿ, ಜನರ ಸಮಸ್ಯೆಗೆ ಸ್ಪಂದಿಸಲು ಪಕ್ಷದ ಕಚೇರಿಗಳು ಅಗತ್ಯವಿದ್ದು, ಜಿಲ್ಲೆಯಲ್ಲಿ ಬಿಜೆಪಿಯ ನೂತನ ಕಚೇರಿ ನಿಮಾರ್ಣದಿಂದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಸ್ವಂತ ಕಟ್ಟಡದಿಂದಾಗಿ ಬಿಜೆಪಿ ಕಚೇರಿ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಲಿದೆ ಎಂದರು.

ಕಾಂಗ್ರೆಸ್​ನಲ್ಲಿ ಪಕ್ಷ ಬಲವರ್ಧನೆಗಿಂತ ಅಧಿಕಾರಕ್ಕೆ ಹೆಚ್ಚು ಮಾನ್ಯತೆ ನೀಡುತ್ತಾರೆ. ಆದರೆ ಬಿಜೆಪಿಯಲ್ಲಿ ಮೊದಲು ಪಕ್ಷ ನಂತರ ಅಧಿಕಾರ ಎಂಬ ತತ್ವ ಸಿದ್ಧಾಂತವಿದೆ. ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್​ನಲ್ಲಿ ರ್ಖಗೆ ಅವರಿಗೆ ವಯಸ್ಸಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಭಿನ್ನಮತ ದೆಹಲಿಯ ಕದ ತಟ್ಟಿದ್ದು, ಮೊನ್ನೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಅವರನ್ನು ಕರೆಸಿ ಛೀಮಾರಿ ಹಾಕಿ ಒಗ್ಗಟ್ಟು ಕಾಪಾಡಲು ಕಿವಿ ಹಿಂಡಿ ಕಳುಹಿಸಿದ್ದರು. ಸಿದ್ದರಾಮಯ್ಯ ರಾಜ್ಯಕ್ಕೆ ಕಾಲಿಡುತ್ತಲೇ ಡಿ.ಕೆ.ಶಿವಕುಮಾರ್​ ವಿರುದ್ಧ ಕಾಲೆಳೆದಿದ್ದಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್​ ಷಾ ರಾಜ್ಯಕ್ಕೆ ಬರುತ್ತಿದ್ದಾರೆಂಬ ಮಾಹಿತಿ ತಿಳಿದು ಕಾಂಗ್ರೆಸ್​ನವರಿಗೆ ಚಳಿಗಿಂತ ಹೆಚ್ಚಿನ ಭೀತಿ ಉಂಟಾಗಿದೆ ಎಂದು ವ್ಯಂಗ್ಯವಾಡಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಾರದಿದ್ದರೆ ಕಾಂಗ್ರೆಸ್​ ವ್ಯಾಕ್ಸಿನ್​ ಹಾಕಿಸುತ್ತಿರಲಿಲ್ಲ. ಇದರಿಂದ ಅದೆಷ್ಟೋ ಜನರು ಬಲಿಯಾಗುತ್ತಿದ್ದರು. ಮೋದಿ ಅಡಳಿತದಲ್ಲಿ ರಾಷ್ಟ್ರದಲ್ಲಿ ಹಲವಾರು ಏರ್​ಪೋರ್ಟ್​ಗಳು, ರೈಲ್ವೆ ಮಾರ್ಗಗಳು, ಹೆದ್ದಾರಿಗಳು ಅಭಿವೃದ್ಧಿ ಕಂಡಿವೆ. ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕಂಪನಿಗಳು ಹೆಚ್ಚಾಗುತ್ತಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ, ಭಾರತವು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್​.ಮುನಿಸ್ವಾಮಿ, ಸರ್ಕಾರದ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ಮುನಿವೆಂಕಟಪ್ಪ, ಮಂಜುನಾಥ್​ಗೌಡ, ವೈ.ಸಂಪಂಗಿ, ವರ್ತೂರು ಪ್ರಕಾಶ್​, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್​, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾವು ಅಭಿವೃದ್ಧಿ ಮಂಡಳಿ ವಾಸುದೇವ್​, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್​ ಸಿಂಗ್​, ವಕ್ತಾರ ಎಸ್​.ಬಿ.ಮುನಿವೆಂಕಟಪ್ಪ, ಪಿ.ಎಸ್​. ಸತ್ಯನಾರಾಯಣರಾಜ್​ ಇದ್ದರು.

ಜನರ ಮನಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಳವಾಗಿ ಬೇರೂರಿದ್ದಾರೆ. ಮೋದಿ ಇಲ್ಲದೇ ಹೋಗಿದ್ದರೆ, ಪಾಕಿಸ್ತಾನ, ಚೀನಾ ದೇಶಗಳನ್ನು ಹಿಡಿಯಲು ಆಗುತ್ತಿರಲಿಲ್ಲ. ಚೀನಾದಲ್ಲಿಂದು ಟೀ ಕುಡಿಯಲು ಕಾಸಿಲ್ಲದಷ್ಟು ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಡಬಲ್​ ಇಂಜಿನ್​ ಇದ್ದುದರಿಂದ ದೇಶ ಹಾಗೂ ರಾಜ್ಯ ಅಭಿವೃದ್ಧಿಗೊಳ್ಳುತ್ತಿದೆ. | ಆರ್​.ಅಶೋಕ್ ​ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net