ಸಿದ್ದರಾಮಯ್ಯ ಸ್ಪರ್ಧೆ ನೆರೆಹೊರೆಯ ಜಿಲ್ಲೆಗೆ ಪ್ರಭಾವ ಬೀರಲ್ಲ

Published on

ಚಿಕ್ಕಬಳ್ಳಾಪುರ:  ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿರುವುದು ವೈಯಕ್ತಿಕವಾಗಿ ಅವರಿಗೇ ಮಾರಕವಾಗಬಹುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭವಿಷ್ಯ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ವೈಯಕ್ತಿಕ ತೀರ್ಮಾನ, ಬಳಿಕ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂಬುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಅನುಗುಣವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವ ವ್ಯೆಹ ರಚಿಸಲಾಗುವುದು ಎಂದರು.

ಸಿದ್ದರಾಮಯ್ಯಗೇ ಕೋಲಾರ ಮಾರಕವಾಗಿರುವಾಗ ನೆರೆಹೊರೆಯ ಜಿಲ್ಲೆಗಳ ಇತರ ಕ್ಷೇತ್ರಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಅಸಲಿಗೆ ಕೋಲಾರಕ್ಕೂ ಅವರಿಗೂ ಯಾವುದೇ ರೀತಿಯ ವಿಶೇಷ ಸಂಬಂಧವಿಲ್ಲ. ಸ್ವಾಭಾವಿಕವಾಗಿ ಅಲ್ಪಸಂಖ್ಯಾತ ಮತ್ತು ಇತರ ಕೆಲ ಜಾತಿಗಳ ಮತಗಳ ಲೆಕ್ಕಾಚಾರದಲ್ಲಿ ತೀರ್ಮಾನ ಕೈಗೊಂಡಿದ್ದಾರೆ ಎಂದರು.

ಕೋಲಾರ ಜಿಲ್ಲೆಯಲ್ಲಿ ಕೆಲ ನಾಯಕರ ಬುಡ ಅಲ್ಲಾಡುತ್ತಿದೆ. ಇದರಿಂದ ಉಳಿಯಲು ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಲಾಗುತ್ತಿದೆ. ಒಂದೊಂದು ಚುನಾವಣೆಗೆ ಒಂದೊಂದು ಕ್ಷೇತ್ರ ಹುಡುಕುತ್ತಿರುವುದು ಏಕೆ ಎಂಬ ವಿಚಾರವನ್ನು ಅವರನ್ನೇ ಕೇಳುವುದು ಒಳಿತು. ಅವರ ಬಗ್ಗೆ ಗೌರವ ಮತ್ತು ವಿಶ್ವಾಸ ಇದೆ. ಈ ಹಿಂದೆ ನಮ್ಮ ನಾಯಕರಾಗಿದ್ದರು. ಈಗ ಪಕ್ಷ ಬೇರೆ, ಅವರ ದಾರಿ ಬೇರೆ ಇದೆ. ಕೋಲಾರವನ್ನು ಏನೇ ಆಗಲೀ ಗೆಲ್ಲಬೇಕೆಂಬುದು ನಮ್ಮ ಗುರಿ ಎಂದರು.

ಪಕ್ಷ ಸಂಘಟನೆಗೆ ಪೂರಕ: ರಾಜಕಾರಣದಲ್ಲಿ ಅವಕಾಶಗಳಿಗೆ ಎದುರು ನೋಡುವುದು ಸ್ವಾಭಾವಿಕ. ಆರೋಗ್ಯಕರ ಸ್ಪರ್ಧೆ ಅಗತ್ಯ, ಅನಾರೋಗ್ಯಕರ ಸ್ಪರ್ಧೆಯಿಂದ ವ್ಯಕ್ತಿತ್ವಕ್ಕೆ ಕುಂದು ಬರಲಿದೆ. ನಾಯಕತ್ವದ ಆಧಾರದಲ್ಲಿ ಪಕ್ಷವು ಅವಕಾಶಗಳನ್ನು ಕಲ್ಪಿಸಲಿದೆ ಎಂದು ಸಚಿವ ಸುಧಾಕರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net