ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳಲು ಗೋವಿನ ಶಾಪ ಕಾರಣ

Published on

ಮಡಿಕೇರಿ: ಗೋವಿನ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿಗೂ ಇದೇ ಕಾರಣ. ಗೋವಿಗೆ ಅಪಮಾನ ಮಾಡುವುದು, ಹಗುರವಾಗಿ ಮಾತನಾಡುವುದು ಮುಂದುವರಿಸಿದ್ದಲ್ಲಿ ಅವರು ಎಲ್ಲಿಯೂ ಗೆಲ್ಲುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಏನ್ ಬೇಕಾದರೂ ತಿನ್ನಲ್ಲಿ. ನಮದ್ದೇನು ಅಡ್ಡಿ ಇಲ್ಲ. ಆದರೆ, ಗೋಮಾತೆಗೆ ಅಪಮಾನ ಮಾಡುವುದನ್ನು ಸಹಿಸಲಾಗದು. ಗೋಮಾಂಸ ಸೇವನೆಗೆ ಸಂಬಂಧಿಸಿದ್ದಂತೆ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗೆ ಅವರ ಮನೆಯವರು ಬೆಂಬಲ ನೀಡುವುದಿಲ್ಲ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಕಾಗಿನೆಲೆ ಸ್ವಾಮೀಜಿ ಮನೆಗೆ ಖುದ್ದು ಭೇಟಿ ಮಾಡಿ, ಪರಿಶಿಷ್ಟ ಪಂಗಡಕ್ಕೆ ಕುರುಬರನ್ನು ಸೇರಿಸುವ ಹೋರಾಟಕ್ಕೆ ಬೆಂಬಲ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ನಾನು ಬರುವುದಿಲ್ಲ. ಬೆಂಬಲ ನೀಡುವುದಾಗಿ ಹೇಳಿದ್ದರು. ಈಗ ಸಮಾವೇಶಕ್ಕೆ ಕರೆಯ ಲಿಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ಕರೆಯಲು ಇದೇನು ಮನೆ ಮದ್ವೆ ನಾ ಎಂದು ಪ್ರಶ್ನಿಸಿದರು.
ಕುರುಬರ ಹೋರಾಟದಲ್ಲಿ ಆರ್‌ಎಸ್‌ಎಸ್ ನೇತೃತ್ವ ವಹಿಸಿದೆ ಎಂದು ಸುಳ್ಳು ಹೇಳಿದರು. ಸುಳ್ಳಿನ ಸರದಾರರಾಗಿರುವ ಅವರಿಗೆ ಸುಳ್ಳು ಹೇಳುವುದಕ್ಕೆ ನೋಬಲ್ ಪ್ರಶಸ್ತಿ ನೀಡಬೇಕು. ಏನೆ ಆದರೂ ತಮ್ಮ ನಾಯಕತ್ವದಲ್ಲಿ ಆಗಬೇಕೆಂಬ ನಿಲುವು ಅವರದ್ದೆಂದು ಅಸಮಾಧಾನ ವ್ಯಕ್ತ ಪಡಿಸಿದರು.
ಸಿಎಂ ಸ್ಥಾನ ಹೋದಲ್ಲಿಂದ ಮತ್ತೊಮ್ಮೆ ಸಿಎಂ ಆಗುವ ಹಗಲುಕನಸ್ಸು ಕಾಣುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಬದಲಾಗುತ್ತಾರೆಂದು ಹೇಳುತ್ತಾ ಬಂದಿದ್ದಾರೆ. ಸಿಎಂ ಸ್ಥಾನದ ಬಗ್ಗೆ ಸಿದ್ದರಾಮಯ್ಯ ನಿರ್ಧರಿಸಲಾಗದು. ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಆಗುತ್ತದೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿದ್ದಾರೆಂದು ಸ್ಪಷ್ಟ ಪಡಿಸಿದ್ದಾರೆ.
ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಬಹಿರಂಗವಾಗಿ ಹೇಳಿಕೆ ನೀಡದ್ದಂತೆ ಸೂಚನೆ ನೀಡಿದ್ದರು ಅವರು ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಬಿಜೆಪಿ ಕೇಂದ್ರ ಸಮಿತಿ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಪ್ರತಿಯೊಬ್ಬ ಶಾಸಕರಿಗೂ ಸಚಿವ ಸ್ಥಾನದ ಆಸೆ ಇರುತ್ತದೆ. ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಲಿಲ್ಲ ಎಂಬ ಬೇಸರ ನನಗೂ ಇದೆ. ಮುಂದಿನ ದಿನಗಳಲ್ಲಿ ಕೊಡಗಿನ ಶಾಸಕರು ಸಚಿವ ಸ್ಥಾನ ಪಡೆಯುವುದು ಖಚಿತ. ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದರಿಂದ ಕಾಂಗ್ರೆಸ್ ತೊರೆದು ಬಂದ ಶಾಸಕರಿಗೆ ಅನಿವಾರ್ಯವಾಗಿ ಸಚಿವ ಸ್ಥಾನ ನೀಡಬೇಕಾಯಿತು. ಅರ್ಧದಷ್ಟು ಸ್ಥಾನ ಮಾತ್ರ ಬಿಜೆಪಿಯಿಂದ ಗೆದ್ದ ಶಾಸಕರಿಗೆ ಹಂಚಿಕೆ ಮಾಡಬೇಕಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಬಗ್ಗೆ ಉನ್ನತಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net