

ಶಿವಮೊಗ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂತ್ರಿ, ಡಿಸಿಎಂ ಹಾಗೂ ಸಿಎಂ ಆದರು. ಆದರೆ ಒಳ್ಳೆಯ ಸಂಸದೀಯ ಪಟುವಾಗಲಿಲ್ಲ ಎಂದು ಆಯನೂರು ಮಂಜುನಾಥ್ ಲೇವಡಿ ಮಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸ್ವಾತಂತ್ರೃ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯನ್ನೇ ದೊಡ್ಡದು ಮಾಡುತ್ತಿದ್ದು, ವಿವಾದ ಮುಗಿಸುವ ಬದಲು ಅಧಿವೇಶನ ನಡೆಸಲು ಬಿಡುವುದಿಲ್ಲವೆಂದು ತಮ್ಮ ದಡ್ಡತನ ಪ್ರದರ್ಶನ ಮಾಡಿದ್ದಾರೆ ಎಂದರು.
ದೊರೆಸ್ವಾಮಿ ಅವರು ಶತಾಯುಷಿಗಳು, ಸ್ವಾತಂತ್ರೃ ಹೋರಾಟಗಾರರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪರ ಮತ್ತು ವಿರುದ್ಧದ ಮಾತುಗಳಿಂದ ನಿತ್ಯವೂ ಅವರು ಅಪಮಾನಕ್ಕೆ ಒಳಲಾಗುವಂತೆ ಮಾಡಿದೆ. ಯತ್ನಾಳ್ ಅವರ ಕೆಲ ಪದ ಬಳಕೆ ಕೂಡ ಸರಿಯಾಗಿರಲಿಲ್ಲ. ಹಾಗೆಯೇ ದೊರೆಸ್ವಾಮಿ ಅವರು ಸ್ವಾತಂತ್ರೃ ಹೋರಾಟಗಾರರಾಗಿ ಅಥವಾ ವೈಯಕ್ತಿಯವಾಗಿ ತಮ್ಮ ನಿಲುವು ಪ್ರಕಟಿಸಬೇಕಿತ್ತು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರ ಗುರಿ ಸ್ವಾತಂತ್ರ್ಯವಾಗಿತ್ತು. ಅದನ್ನೇ ದೊರೆಸ್ವಾಮಿ ಮಾಡಿದ್ದಾರೆ. ಆದರೆ ಅವರು ವಿರುದ್ಧ ಈಗ ಕೇಳಿಬರುತ್ತಿರುವ ಪರ-ವಿರೋಧಗಳನ್ನು ನೋಡಿ 100 ವರ್ಷದಲ್ಲಿ ಕಾಣದ ನೋವನ್ನು ಈಗ ಕಾಣುವಂತಾಗಿದೆ. ಇದು ಆಗಬಾರದಿತ್ತು ಎಂದರು.