

ಹಾಸನ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಅವರು 14 ಸೈಟುಗಳನ್ನು ವಾಪಸ್ ನೀಡಿರುವುದು ತಪ್ಪನ್ನು ಒಪ್ಪಿಕೊಂಡಂತೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎನ್ನುವುದಾದರೆ ನಿವೇಶನವನ್ನು ಮತ್ತೆ ಏಕೆ ವಾಪಸ್ ನೀಡಲು ಅವರ ಪತ್ನಿ ಪತ್ರ ಬರೆದಿದ್ದಾರೆ. ಇದರಿಂದ ಅವರು ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಂಡಂತೆ ಅಲ್ಲವೇ. ಆದ್ದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ. ಕ್ಲೀನ್ ಚಿಟ್ ಪಡೆದುಕೊಂಡ ಬಳಿಕ ಮತ್ತೆ ಮುಖ್ಯಮಂತ್ರಿಗಳಾಗಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಅವರ ಧರ್ಮಪತ್ನಿಗೆ ಸಹೋದರರು ಜಾಗ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಜಾಗ ದಲಿತರಿಗೆ ಸೇರಿದ್ದು. ಅದನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ವಶಪಡಿಸಿಕೊಂಡು ಅಭಿವೃದ್ಧಿಪಡಿಸಿದ್ದರು. ನಗರ ಅಭಿವೃದ್ಧಿ ಪ್ರಾಧಿಕಾರ ಎಲ್ಲಿ ಜಾಗ ಪಡೆದುಕೊಂಡಿತ್ತು. ಅದೇ ಜಾಗದಲ್ಲಿ ಸೈಟು ಪಡೆಯಬೇಕಿತ್ತು. ಆದರೆ ಇವರು ಬೆಳೆಬಾಳುವ ಪ್ರದೇಶದಲ್ಲಿ ಸೈಟ್‌ಗಳನ್ನು ಪಡೆದುಕೊಂಡಿದ್ದಾರೆ. ಈಗ ಪ್ರಾಧಿಕಾರಕ್ಕೆ ಸೈಟ್ ವಾಪಸ್ ನೀಡಿ ಪತ್ರ ಬರೆದಿದ್ದಾರೆ ಎಂದರು.
ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಹೇಳಿದರು.