

ದಾವಣಗೆರೆ: ನಗರದ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎಸ್. ಶಿವಣ್ಣ (82) ಹೃದಯಾಘಾತದಿಂದ ಶನಿವಾರ ಬೆಳಗ್ಗೆ ನಿಧನರಾದರು.
ಅವರಿಗೆ ಪತ್ನಿ ಜಸ್ಟಿನ್ ಡಿಸೋಜ (ಸಂಸ್ಥೆಯ ಮುಖ್ಯೋಪಾಧ್ಯಾಯಿನಿ), ಪುತ್ರರಾದ ಡಿ.ಎಸ್. ಹೇಮಂತ್, ಡಾ. ಡಿ.ಎಸ್. ಜಯಂತ್, ಡಿ.ಎಸ್. ಪ್ರಶಾಂತ್ ಇದ್ದಾರೆ. ಸಂಜೆ ಆನಗೋಡು ಸಮೀಪದ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು.
ಇದಕ್ಕೂ ಮೊದಲು ಸಿದ್ದಗಂಗಾ ಶಾಲೆಯ ಆವರಣದಲ್ಲಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಮಾಜಿ ಎಂಎಲ್ಸಿ ಡಾ.ಎ.ಎಚ್. ಶಿವಯೋಗಿಸ್ವಾಮಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಎಸ್ಪಿ ಹನುಮಂತರಾಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ, ಕಾರ್ಯದರ್ಶಿ ಇ.ಎಂ. ಮಂಜುನಾಥ್, ಖಜಾಂಚಿ ಮಂಜಪ್ಪ ಮಾಗನೂರು ಅಂತಿಮ ನಮನ ಸಲ್ಲಿಸಿದರು.
ರಾಮನಗರದ ಮಾಗಡಿಯವರಾದ ಶಿವಣ್ಣ, 60ರ ದಶಕದಲ್ಲಿ ದಾವಣಗೆರೆಗೆ ಬಂದರು. 1966ರಲ್ಲಿ ಶಿವಾನಂದ ಟ್ಯುಟೋರಿಯಲ್ ಆರಂಭಿಸಿದ ಶಿವಣ್ಣ, ಗಣಿತ ಮತ್ತು ವಿಜ್ಞಾನ ವಿಷಯಗಳ ಉತ್ತಮ ಶಿಕ್ಷಕರಾಗಿದ್ದರು. 1970ರಲ್ಲಿ ಸ್ವಂತ ಶಾಲೆಯ ಕನಸು ಸಾಕಾರಗೊಳಿಸಿದರು. 5 ದಶಕಗಳ ನಿರಂತರ ಶ್ರಮದಿಂದ ಸಿದ್ದಗಂಗಾ ಸಂಸ್ಥೆಯು ದಾವಣಗೆರೆಯ ಮನೆ ಮಾತಾಗುವಂತೆ ಬೆಳೆಸಿದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿದರು.
ಶಿವಣ್ಣ ಶಿಕ್ಷಣ ತಜ್ಞರು, ಹೋರಾಟಗಾರರೂ ಆಗಿದ್ದರು. ಅವರು ಪ್ರಜಾಭಿಮತ , ಸೌರಭ ಪತ್ರಿಕೆಗಳನ್ನು ನಡೆಸಿದ್ದರು. ಅವರಿಗೆ ರಂಭಾಪುರಿ ಪೀಠವು ‘ಶಿಕ್ಷಣ ತಜ್ಞ’ ಎಂದು, ದಾವಣಗೆರೆಯ ಅನ್ನದಾನೀಶ್ವರ ಮಠದವರು ‘ಶಿಕ್ಷಣ ಸಿರಿ’ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದರು.