ಹುಣಸೂರು: ಪ್ರತಿಷ್ಠಿತ ಖಾಸಗಿ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಸಮಾಜ ಸೇವೆಗಾಗಿಯೇ ಮೀಸಲಿಟ್ಟಲ್ಲಿ ಸಾಮುದಾಯಿಕ ಸುಧಾರಣೆ ಸಾಧ್ಯ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಕಟ್ಟೆಮಳಲವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐಟಿಸಿ/ಎಂಎಸ್‌ಕೆ ಮತ್ತು ಔಟ್‌ರಿಚ್ ಸಂಸ್ಥೆಯ ವತಿಯಿಂದ ನಿರ್ಮಿಸಿರುವ ಶೌಚಗೃಹಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಸರ್ಕಾರದಿಂದಲೇ ನಿರೀಕ್ಷಿಸುವುದಕ್ಕಿಂತ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಎತ್ತರಕ್ಕೆ ಬೆಳೆದಿರುವ ಖಾಸಗಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸುವುದು ಅಗತ್ಯ. ಅದಕ್ಕಾಗಿಯೇ ಸಿಎಸ್‌ಆರ್ ನಿಧಿ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಫಂಡ್) ಮೂಲಕ ಸಮಾಜ ಸೇವೆ ಮಾಡಬೇಕೆನ್ನುವ ನೀತಿಯನ್ನು ಸರ್ಕಾರ ರೂಪಿಸಿದೆ. ಐಟಿಸಿ ಕಂಪನಿಯು ಈ ದಿಸೆಯಲ್ಲಿ ಉತ್ತಮ ಹೆಜ್ಜೆಯನ್ನಿಟ್ಟಿದೆ. ಮೂರು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ನಿರ್ಮಾಣಕ್ಕಾಗಿ ಐಟಿಸಿ ಕಂಪನಿಗೆ ಕೋರಿದ್ದೆ. ಅದರಂತೆ ಅವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಶೌಚಗೃಹ ನಿರ್ಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಔಟ್‌ರೀಚ್ ಸಂಸ್ಥೆಯ ತರಬೇತಿ ಸಂಯೋಜಕ ಜಿ.ಎಸ್.ಜಗದೀಶ ಮಾತನಾಡಿ, ಸಂಸ್ಥೆಯಿಂದ 2015 ರಿಂದ 2022 ರವರೆಗೆ 34 ಶಾಲೆಗಳಿಗೆ ಹೈಟೆಕ್ ಶೌಚಗೃಹಗಳು, 5 ಶಾಲೆಗಳಿಗೆ ಕಾಂಪೌಂಡ್, 28 ಶಾಲೆಗಳಿಗೆ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ, 23 ಶಾಲೆಗಳಿಗೆ ಕೈತೊಳೆಯುವ ಘಟಕಗಳು, 4 ಶಾಲೆಗಳ ದುರಸ್ತಿ, 3 ಅಂಗನವಾಡಿಗಳಿಗೆ ಹೈಟೆಕ್ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಸಹಾಯಕ ವ್ಯವಸ್ಥಾಪಕ ಚನ್ನವೀರೇಶ್ ಮಾತನಾಡಿ, ಕಂಪನಿಯಿಂದ ಕೆರೆಗಳಲ್ಲಿ ಹೂಳು ತೆಗೆಸುವ, ಜಮೀನಿಗೆ ಬದುಗಳ ನಿರ್ಮಾಣ, ಸಸಿಗಳ ವಿತರಣೆ, ಕೃಷಿ ಹೊಂಡ, ಜೀವವೈವಿಧ್ಯ ಉದ್ಯಾನಗಳ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಕಟ್ಟೆಮಳಲವಾಡಿ, ಧರ್ಮಾಪುರ, ದೊಡ್ಡಹೆಜ್ಜೂರು, ಮಂಚಬಾಯನಹಳ್ಳಿ, ಮುಳ್ಳೂರು, ದೇವಿಗಳ್ಳಿ, ಕೊಳವಿಗೆ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರಿಗೆ ಮತ್ತು ಅಂಗನವಾಡಿ ಕೇಂದ್ರಗಳಾದ ಗೌರಿಪುರ, ಉಯಿಗೌಡನಹಳ್ಳಿ, ದೊಡ್ಡೇಗೌಡನಕೊಪ್ಪಲು ಅಂಗನವಾಡಿ ಕಾರ್ಯಕರ್ತರಿಗೆ ಶಾಸಕರು ಶೌಚಗೃಹಗಳ ಕೀಗಳನ್ನು ಹಸ್ತಾಂತರಿಸಿದರು.
ಐಟಿಸಿ ಕಂಪನಿಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಹರೀಶ್ ಬಾಬು, ಕಾರ್ಯಕ್ರಮ ಕಾರ್ಯನಿರ್ವಾಹಕ ಮನೋಜ್, ಕ್ಷೇತ್ರ ಸಮನ್ವಯ ಅಧಿಕಾರಿ ಸಂತೋಷ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಶಿವು, ಮುಖ್ಯ ಶಿಕ್ಷಕಿ ಲೂಸಿಪ್ರೇಮಾ, ಔಟ್‌ರೀಚ್ ಸಂಸ್ಥೆಯ ಇಂಜಿನಿಯರ್ ಚಂದ್ರಶೇಖರ್, ಲೆಕ್ಕಾಧಿಕಾರಿ ನಂಜುಂಡಸ್ವಾಮಿ, ಸಮುದಾಯ ಸಂಘಟಕ ಪ್ರಶಾಂತ್, ಲೋಕೇಶ್, ಶಶಿಕುಮಾರ್, ಕಾಂತರಾಜ್, ತಾಪಂ ಮಾಜಿ ಅಧ್ಯಕ್ಷೆ ಪದ್ಮಮ್ಮ ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ಹಾಜರಿದ್ದರು.