- ಡಿಸಿಎಂ ಹುದ್ದೆ, ಆಪ್ತರಿಗೆ ಸಚಿವ ಸ್ಥಾನಕ್ಕಾಗಿ ಲಾಬಿ
- ಮಸ್ಕಿ ಪ್ರತಾಪಗೌಡ ಪರವಾಗಿ ಸಮಾಲೋಚನೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2-3 ದಿನಗಳೊಳಗೆ ಮತ್ತೆ ದೆಹಲಿಗೆ ತೆರಳುತ್ತಿದ್ದು, ತೆರೆಮರೆಯಲ್ಲಿ ಸಚಿವಾಕಾಂಕ್ಷಿಗಳ ಒತ್ತಡ ಹೆಚ್ಚಿದೆ.
ಸಿಎಂ ಅಧಿಕೃತ ನಿವಾಸ ' ಕಾವೇರಿ'ಗೆ ಮಂಗಳವಾರ ಬೆಳಗ್ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆಗಮಿಸಿ, ಬಿಎಸ್ ವೈ ಜತೆಗೆ 15 ನಿಮಿಷಗಳಿಗೂ ಹೆಚ್ಚು ಕಾಲ ಚರ್ಚಿಸಿರುವುದು ಕುತೂಹಲ ಕೆರಳಿಸಿದೆ.
ಉಪ ಮುಖ್ಯಮಂತ್ರಿ ಹುದ್ದೆಗಾಗಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದಲ್ಲದೆ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೂಲಕವೂ ಒತ್ತಡ ಹೇರಿದ್ದು, ಮತ್ತೊಮ್ಮೆ ಬಿಎಸ್ ವೈ ಮುಂದೆ ಬೇಡಿಕೆಯಿಡಲು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಆಪ್ತರಾದ ಎಚ್.ವಿಶ್ವನಾಥ್, ಸಿ ಪಿ.ಯೋಗೇಶ್ವರ ಪರ ವಕಾಲತ್ತು ನಡೆಸಿ, ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಾಪಗೌಡರಿಗೆ ಟಿಕೆಟ್ ಗಾಗಿ ಒತ್ತಡ
ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಈ ಕ್ಷೇತ್ರದ ಉಪ ಚುನಾವಣೆಯ ಹಾದಿ ಸುಗಮವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಟಿಕೆಟ್ ನ್ನು ಪ್ರತಾಪ ಗೌಡರಿಗೆ ಖಾತರಿಪಡಿಸಿಕೊಳ್ಳುವಂತೆ ಕೋರಿದ್ದು, ದೆಹಲಿಯಲ್ಲಿ ವರಿಷ್ಠರ ಭೇಟಿ ಕಾಲಕ್ಕೆ ಈ ವಿಷಯವನ್ನು ಚರ್ಚಿಸಿ ಟಿಕೆಟ್ ಫೈನಲ್ ಮಾಡಿಕೊಂಡು ಬರಬೇಕು ಎಂದು ಬಿಎಸ್ ವೈಗೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.