ಸಿಎಂ ತವರಲ್ಲಿ ‘ಕರ್ನಾಟಕ ಕುಸ್ತಿ ಹಬ್ಬ’ ಮಾ.1ರಿಂದ

25 Kusti Habba B
Published on

ಹಾವೇರಿ: ಗ್ರಾಮೀಣ ಕ್ರೀಡೆ ಕುಸ್ತಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಮಾ1ರಿಂದ 5ರವರೆಗೆ ‘ತೃತೀಯ ಕರ್ನಾಟಕ ಕುಸ್ತಿ ಹಬ್ಬ’ವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘ ಹಾಗೂ ಜಿಲ್ಲೆಯ ಪೈಲ್ವಾನರ ಸಮ್ಮುಖದಲ್ಲಿ ಈ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗಿದೆ. ಕುಸ್ತಿ ಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕುಸ್ತಿ ಹಬ್ಬಕ್ಕೆ ಸರ್ಕಾರ 3 ಕೋಟಿ ರೂ. ನೀಡಿದೆ. ಕುಸ್ತಿಪಟುಗಳಿಗೆ ಬಹುಮಾನ ಮೊತ್ತವಾಗಿ 1.37 ಕೋಟಿ ರೂ. ಮೀಸಲಿಡಲಾಗಿದೆ. ಕುಸ್ತಿಪಟುಗಳಿಗೆ ಉಚಿತವಾಗಿ ಊಟ, ವಸತಿ ಸೌಕರ್ಯ ಮಾಡಲಾಗುವುದು ಎಂದರು.
ಎಂಟು ವಿಭಾಗಗಳಲ್ಲಿ ಕುಸ್ತಿ ಪಂದ್ಯ ನಡೆಯಲಿದ್ದು, ನಾಲ್ಕು ಮಹಿಳಾ ಹಾಗೂ ನಾಲ್ಕು ಪುರುಷ ವಿಭಾಗದಲ್ಲಿ ಮಣ್ಣಿನ ಕುಸ್ತಿಗಳು ಜರುಗಲಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 1500 ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಮೊದಲ ದಿನ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಎರಡನೇ ಕುಸ್ತಿ ಪಂದ್ಯಗಳು ಆರಂಭಗೊಳ್ಳಲಿವೆ. ಬೆಳಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಪಂದ್ಯಾವಳಿಗಳು ಜರುಗಲಿವೆ. ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ ಎಂದರು.
ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ರಮೇಶ ಮಾತನಾಡಿ, ರಾಜ್ಯಮಟ್ಟದ ಮೂರನೇ ಕುಸ್ತಿ ಹಬ್ಬ ಇದಾಗಿದ್ದು, ಬೆಳಗಾವಿಯಲ್ಲಿ ಮೊದಲ, ಹುಬ್ಬಳ್ಳಿಯಲ್ಲಿ ಎರಡನೇ ಕುಸ್ತಿ ಹಬ್ಬ ಆಯೋಜಿಸಲಾಗಿತ್ತು. ಶಿಗ್ಗಾಂವಿಯಲ್ಲಿ ಜರುಗುತ್ತಿರುವುದು ಮೂರನೇ ಕುಸ್ತಿ ಹಬ್ಬ. ಚಿತ್ತ ಮತ್ತು ಪಾಯಿಂಟ್ ಎರಡೂ ವಿಭಾಗದಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕುಸ್ತಿಪಟುಗಳನ್ನು ಆಹ್ವಾನಿಸಲಾಗಿದೆ. ಶೀಘ್ರವೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಲತಾ ಹಾಗೂ ಕುಸ್ತಿ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಪ್ರದರ್ಶನ ಪಂದ್ಯ
ಕೊನೆಯ ದಿನ ಮಾ.5ರಂದು ಸಮಾರೋಪಕ್ಕೂ ಮೊದಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹತ್ತು ಕುಸ್ತಿಪಟುಗಳನ್ನು ಆಹ್ವಾನಿಸಿ, ಐದು ಪ್ರದರ್ಶನ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿಸಿ ವಿವರಿಸಿದರು.

ಉಚಿತ ಪ್ರವೇಶ

ಉಚಿತ ಊಟ, ವಸತಿ ವ್ಯವಸ್ಥೆ

1500 ಕುಸ್ತಿ ಪಟುಗಳು ಭಾಗಿ

3 ಕೋಟಿ ರೂ. ಮೀಸಲು

1.37 ಕೋಟಿ ರೂ. ಬಹುಮಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net