ಸಿಎಂ ಆಗುವ ಆಸೆ ಈಡೇರಲ್ಲವೆಂದು ಯುವಕ ಆತ್ಮಹತ್ಯೆ

Suicide 9 Jul 20
Published on

ಬೆಂಗಳೂರು : ಮುಖ್ಯಮಂತ್ರಿ ಆಗುವ ಕನಸು ನನಸು ಆಗುವುದಿಲ್ಲ ಎಂದು ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಯನಗರದ 4ನೇ ಹಂತದ ಬಾಡಿಗೆ ಮನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಶಾಂಕ್ (22) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ನೇಹಿತರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಕಾಂ ಪದವಿಧರ ಶಶಾಂಕ್, ಒಂದು ತಿಂಗಳ ಹಿಂದೆ ನೌಕರಿ ಅರಸಿ ನಗರಕ್ಕೆ ಬಂದು ಜಯನಗರದ 4ನೇ ಹಂತದಲ್ಲಿ ಸ್ನೇಹಿತರ ಜತೆ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದ. ಹಲವೆಡೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಎಲ್ಲಿಯೂ ಉದ್ಯೋಗ ಸಿಕ್ಕಿರಲಿಲ್ಲ. ಬುಧವಾರ ಬೆಳಗ್ಗೆ 7 ಗಂಟೆಗೆ ಗೆಳೆಯರು ಕೆಲಸಕ್ಕೆ ತೆರಳಿದ್ದರು. ಏಕಾಂಗಿಯಾಗಿದ್ದ ಶಶಾಂಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಶಶಾಂಕ್ ಮೊಬೈಲ್‌ಗೆ ಗೆಳೆಯರು ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣಕ್ಕೆ ಆತಂಕಗೊಂಡು ಕೊಠಡಿಗೆ ಬಂದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಡೆತ್‌ನೋಟ್ ಸಿಕ್ಕಿಲ್ಲ. ಕೆಲಸ ಸಿಗದೆ ಜಿಗುಪ್ಸೆಗೊಂಡಿದ್ದ ಶಶಾಂಕ್, ಸಿಎಂ ಆಗುವ ಗುರಿ ಹೊಂದಿದ್ದೇನೆ. ಆದರೆ ನನ್ನ ಬದುಕಿನ ಕನಸುಗಳು ಈಡೇರುವುದಿಲ್ಲ ಎಂದು ಸ್ನೇಹಿತರ ಜತೆ ಬೇಸರ ವ್ಯಕ್ತಪಡಿಸಿಕೊಂಡಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ನಿರ್ಧರಕ್ಕೆ ಬಂದಿರುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net