

ಕೀರ್ತಿನಾರಾಯಣ ಸಿ. ಬೆಂಗಳೂರು
ಬೆಂಗಳೂರು: ಸರ್ಕಾರಿ ಇಲಾಖೆಗಳ ‘ಸಿ ಮತ್ತು ಡಿ’ ದರ್ಜೆ ನೌಕರರಿಗೆ ವರ್ಗಾವಣೆ ಸಂಕಷ್ಟ ಎದುರಾಗಿದೆ. ಸ್ವಂತ ಕೋರಿಕೆಯ ಅಂತರ ಜಿಲ್ಲಾ/ವಲಯ/ಕಮೀಷನರೇಟ್ ವರ್ಗಾವಣೆಗಿದ್ದ ಅವಕಾಶವನ್ನು ಕಸಿದುಕೊಂಡಿರುವ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ 2021ರ ತಿದ್ದುಪಡಿಗೆ ನೌಕರರ ವಲಯದಲ್ಲಿ ಆಕ್ರೋಶ ಸ್ಪೋಟಗೊಂಡಿದ್ದು, ತಿದ್ದುಪಡಿ ನಿಯಮ ಹಿಂಪಡೆಯಲು ಆಗ್ರಹ ವ್ಯಕ್ತವಾಗಿದೆ. ನೌಕರರ ಒತ್ತಾಯಕ್ಕೆ ಖುದ್ದು ಗೃಹಸಚಿವರು, ಸಚಿವರು, ಡಿಜಿಪಿ, ಮಾಜಿ ಸಿಎಂ ಹಾಗೂ ಹಲವು ಶಾಸಕರೂ ಧ್ವನಿಗೂಡಿಸಿದ್ದಾರೆ.
ಸಿ ಮತ್ತು ಡಿ ದರ್ಜೆಯ ನೌಕರರನ್ನು ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಘಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಳಿಸಲು ಇಲಾಖಾ ಮುಖ್ಯಸ್ಥರಿಗೆ ಅಧಿಕಾರವಿತ್ತು. ಆದರೆ, ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2021 ಹೊರಡಿಸುವ ಮೂಲಕ ಸ್ವಂತ ಕೋರಿಕೆ ವರ್ಗಾವಣೆಗೆ ಅವಕಾಶವಿದ್ದ 16 (ಎ) ನಿಯಮವನ್ನು ಕಾಯ್ದೆಯಿಂದ ತೆಗೆದುಹಾಕಲಾಗಿದೆ. ಇದರಿಂದ ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆ ಹೊಂದಲು ಅವಕಾಶವೇ ಇಲ್ಲ. ಸರ್ಕಾರಿ ನೌಕರರಾಗಿರುವ ಪತಿ-ಪತ್ನಿ ಅವರ ಸೇವಾವಧಿ ಪೂರ್ತಿ ಒಂದೇ ಜಿಲ್ಲೆ ಅಥವಾ ಘಟಕಕ್ಕೆ ವರ್ಗಾವಣೆಗೊಂಡು ಒಟ್ಟಿಗೆ ಕೆಲಸ ಮಾಡಲೂ ಅವಕಾಶ ಇಲ್ಲವಾಗಿದೆ.
ಕೆಸಿಎಸ್ಆರ್ ತಿದ್ದುಪಡಿ ನಿಯಮದಿಂದಾಗಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ನಿಂದ ಸಬ್ ಇನ್ಸ್ಪೆಕ್ಟರ್ವರೆಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಕಂದಾಯ ಇಲಾಖೆಯಲ್ಲಿರುವ ಗ್ರಾಮ ಲೆಕ್ಕಿಗರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಇತರ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ನೌಕರರಿಗೂ ವರ್ಗಾವಣೆ ಸಂಕಷ್ಟ ಎದುರಾಗಿದೆ.
ವರ್ಗಾವಣೆ ನಿಯಮದಿಂದ ಪೊಲೀಸ್ ಇಲಾಖೆಗೆ ವಿನಾಯಿತಿ ಕೊಡುವಂತೆ ಹೆಚ್ಚು ಒತ್ತಡ ಹೇರಲಾಗುತ್ತಿದೆ. ಇಲಾಖೆಯಲ್ಲಿ 86 ಸಾವಿರಕ್ಕೂ ಅಧಿಕ ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೇಬಲ್, ಎಎಸ್ಐ ಹಾಗೂ ಪಿಎಸ್ಐಗಳಿದ್ದಾರೆ. ಸ್ವಗ್ರಾಮ/ಜಿಲ್ಲೆಗಳನ್ನು ಬಿಟ್ಟು ಇತರ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ, ಸಂಚಾರ ನಿರ್ವಹಣೆ, ಅಪರಾಧ ನಿಯಂತ್ರಣ, ತನಿಖೆ, ಬಂದೋಬಸ್ತ್ ನೋಡಿಕೊಳ್ಳುತ್ತಿದ್ದಾರೆ. ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಇರುವುದರಿಂದ ಕೋರಿಕೆ ವರ್ಗಾವಣೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಸ್ವಂತ ಕೋರಿಕೆ ಮೇರೆಗೆ ಜಿಲ್ಲಾ ಘಟಕಗಳಿಗೆ ವರ್ಗಾವಣೆಯಾಗಲು ಕನಿಷ್ಠ 7 ವರ್ಷ ಸೇವಾವಧಿ ಪೂರ್ಣಗೊಳಿಸಲು ನಿಗದಿಪಡಿಸಲಾಗಿದೆ. ಅಂತರ ಜಿಲ್ಲಾ ಘಟಕಕ್ಕೆ ವರ್ಗಾವಣೆಗೊಂಡಲ್ಲಿ ಸೇವಾ ಜೇಷ್ಠತೆ ಬಿಟ್ಟುಕೊಡಬೇಕು ಎಂಬ ನಿಬಂಧನೆ ಇದೆ. ವರ್ಗಾವಣೆಗೊಳ್ಳುವ ಘಟಕದಲ್ಲಿ ವರದಿ ಮಾಡಿಕೊಂಡ ದಿನದಿಂದ ಜೇಷ್ಠತೆಯಲ್ಲಿ ಕೊನೆಯವರಾಗಿ ಸೇರ್ಪಡೆಗೊಳ್ಳುತ್ತಾರೆ. ಹೀಗಾಗಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಕೋರಿಕೆ ವರ್ಗಾವಣೆಗೆ ಅವಕಾಶ ಕೊಡಬೇಕು ಎಂಬುದು ಪೊಲೀಸರ ವಾದ.
ವರ್ಗಾವಣೆಗೆ ನಿಗದಿಪಡಿಸಿರುವ ಸೇವಾವಧಿ ಹಾಗೂ ಜೇಷ್ಠತೆ ಬಿಟ್ಟುಕೊಡುವ ನಿಂಬಂಧನೆಗೆ ಒಳಪಟ್ಟು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆ ಮಾಡಲು ಇಲಾಖೆ ಮುಖ್ಯಸ್ಥರಿಗೆ ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಡಿಜಿಪಿ ಪತ್ರ ಬರೆದಿದ್ದಾರೆ. ಪತಿ-ಪತ್ನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೇವಾ ಜೇಷ್ಠತೆಗೆ ಧಕ್ಕೆಯಾಗದಂತೆ ಪರೀಕ್ಷಾರ್ಥ ಅವಧಿ ಪೂರೈಸಿರುವ ಹಾಗೂ ರಿಕ್ತಸ್ಥಾನ ಲಭ್ಯತೆ ಆಧಾರದ ಮೇಲೆ ವರ್ಗಾವಣೆಗೊಳಿಸಲು ಅನುಮತಿ ಬೇಕು. ಪೊಲೀಸ್ ಸಿಬ್ಬಂದಿ ಮಂಡಳಿ ನಿರ್ದೇಶನಗಳ ಅನ್ವಯ ವರ್ಗಾವಣೆಗಳಿಗೆ ಅವಕಾಶ ಇದೆ. ಮನೋಸ್ಥೈರ್ಯದಿಂದ ಸಾರ್ವಜನಿಕ ಸೇವೆ ಸಲ್ಲಿಸಲು ಸ್ವಂತ ಕೋರಿಕೆ ಮೇಲೆ ವರ್ಗಾವಣೆಗೊಳಿಸಲು ಅಗತ್ಯ ಎಂದು ಪ್ರತಿಪಾದಿಸಲಾಗಿದೆ.
ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿ ಅನುಷ್ಠಾನದಲ್ಲಿ ಪೊಲೀಸರಿಗೆ ಅನ್ಯಾಯ ಮಾಡಲಾಗಿದೆ. ಪೊಲೀಸರ ಸಮಸ್ಯೆಗಳು ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಹೀಗಾಗಿ ಕರ್ನಾಟಕ ಬಂದ್ಗೆ ಕರೆ ನೀಡಲು ಪೊಲೀಸ್ ಕುಟುಂಬಗಳು ಸಿದ್ಧವಾಗಿವೆ. ಪೊಲೀಸರ ನೈಜ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಆರಂಭಿಸುವುದಾಗಿ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್, ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಸಿದ್ದು ಸವದಿ ಸೇರಿ ಹಲವು ಜನಪ್ರತಿನಿಧಿಗಳು ಸರ್ಕಾರಕ್ಕೆ ಪತ್ರ ಬರೆದು ಒತ್ತಡ ಹೇರಿದ್ದಾರೆ. ಅಂತರ ಜಿಲ್ಲಾ/ವಲಯ ವರ್ಗಾವಣೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಿ. ಡಿ ದರ್ಜೆ ನೌಕರರಿಗೆ ಕೋರಿಕೆ ವರ್ಗಾವಣೆ ಇಲ್ಲ ?ಸೇವಾವಧಿ ಪೂರ್ತಿ ಸಾಮಾನ್ಯ ವರ್ಗಾವಣೆ ಅನ್ವಯವೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ?ಪೊಲೀಸ್ ಇಲಾಖೆಯಲ್ಲಿ ಸರಿಯಾಗಿ ರಜೆ ಸಿಗದ ಕಾರಣ ಕುಟುಂಬ ಯೋಗಕ್ಷೇಮ ನೋಡಲಾಗಲ್ಲ ?ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯಪೀಡಿತರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಪರದಾಟ ?ಒತ್ತಡದಲ್ಲೇ ಕೆಲಸ ಮಾಡಬೇಕಾದ್ದರಿಂದ ಮನೋಸ್ಥೈರ್ಯ ಕುಗ್ಗಿ, ಸಮರ್ಪಕ ಸೇವೆ ಕಷ್ಟ ?ಪತಿ-ಪತ್ನಿಗೆ ಸೇವಾವಧಿ ಪೂರ್ತಿ ಒಂದೇ ಜಿಲ್ಲೆ ಅಥವಾ ವಲಯದಲ್ಲಿ ಕೆಲಸ ಮಾಡುವ ಅವಕಾಶವಿಲ್ಲ.
ಕೆಸಿಎಸ್ಆರ್ ತಿದ್ದುಪಡಿ ನಿಯಮದಲ್ಲಿ 16 (ಎ) ತೆಗೆದು ಹಾಕಿರುವುದರಿಂದ ವರ್ಗಾವಣೆಗೆ ಸಮಸ್ಯೆಯಾಗಿದೆ. ಪತಿ-ಪತ್ನಿ ವರ್ಗಾವಣೆ ಸಂಬಂಧ ಹೊರಡಿಸಿರುವ ಆದೇಶವೂ ಪೂರಕವಾಗಿಲ್ಲ. ಆದ್ದರಿಂದ ನೌಕರರ ಹಿತದೃಷ್ಟಿಯಿಂದ ಈ ಎರಡೂ ಆದೇಶಗಳನ್ನು ಮರು ಪರಿಶೀಲಿಸಿ, ನೌಕರರಿಗೆ ಅನುಕೂಲವಾಗುವಂತೆ ಪರಿಷ್ಕೃತ ಆದೇಶ ಹೊರಡಿಸುವಂತೆ ಶಾಸಕರು ಮನವಿ ಮಾಡಿರುವುದಾಗಿ ಉಲ್ಲೇಖಿಸುತ್ತ ಸಿಎಂ ಬೊಮ್ಮಾಯಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಪತ್ರ ಬರೆದಿದ್ದಾರೆ. ಜತೆಗೆ, ಎಲ್ಲ ಜಿಲ್ಲೆಗಳಿಂದ ಪೊಲೀಸರೂ ಸಿಎಂ, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತಿದ್ದಾರೆ.
ಕೆಸಿಎಸ್ಆರ್ ತಿದ್ದುಪಡಿ ಕಾಯ್ದೆಯಿಂದ 16 (ಎ) ನಿಯಮ ತೆಗೆದು ಹಾಕಿರುವುದರಿಂದ ಸಿ ಮತ್ತು ಡಿ ದರ್ಜೆ ಸರ್ಕಾರಿ ನೌಕರರ ಸ್ವಂತ ಕೋರಿಕೆ ವರ್ಗಾವಣೆಗೆ ಸಮಸ್ಯೆಯಾಗಿದೆ. ಪೊಲೀಸ್ ಇಲಾಖೆ, ಆರ್ಡಿಪಿಆರ್, ಕಂದಾಯ ಇಲಾಖೆ ನೌಕರರಿಗೆ ಹೆಚ್ಚು ತೊಂದರೆಯಾಗಿದೆ. ಸರ್ಕಾರದ ಜತೆ ಈಗಾಗಲೇ ರ್ಚಚಿಸಿದ್ದು, ಪತಿ-ಪತ್ನಿ ವರ್ಗಾವಣೆಗೆ ಒಪ್ಪಿಗೆ ಸಿಕ್ಕಿದೆ.| ಸಿ.ಎಸ್. ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ