

ವಿಧಾನ ಪರಿಷತ್ ಸದನದಲ್ಲಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆ ಪದ ಪ್ರಯೋಗಿಸಿದ್ದು ನಿಜ. ಅದಕ್ಕೆ ನಾನೇ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಸಿ.ಟಿ.ರವಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದರು. ನಾನೇ ಆ ಪದವನ್ನು ಕೇಳಿಸಿಕೊಂಡು ಒಂದು ಕ್ಷಣ ಗಾಬರಿಯಾಗಿ ಬಿಟ್ಟೆ. ಏನು ಇಂಥ ಪದಗಳನ್ನು ಬಳಸುತ್ತಿದ್ದಾರಲ್ಲ ಅಂದು ಕೊಂಡೆ. ತಕ್ಷಣ ನಾನು ಲಕ್ಷ್ಮೀ ಹೆಬ್ಬಾಳ್ಕರ್ ಬಳಿಗೂ ಹೋದೆ. ಆಗ ಅವರೂ ನನಗೆ ಸಿ.ಟಿ. ರವಿ ಬಳಸಿದ ಪದವನನು ಹೇಳಿದರು. ಆದರೀಗ ಸಿ.ಟಿ. ರವಿ ಅವರು ನಾನು ಆ ಪದವನ್ನೇ ಬಳಸಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಸಿ.ಟಿ. ರವಿ ಬಳಸಿದ್ದು ಫ್ರಸ್ಟೇರೇಟ್ ಎಂಬ ಪದ ಅಲ್ಲ. ಅವರು ಬಳಸಿದ್ದು ಕೆಟ್ಟ ಪದ. ಅದಕ್ಕೆ ನಾನೇ ಸಾಕ್ಷಿ. ಈಗ ಸಿಂಪಥಿ ಗಿಟ್ಟಿಸಿಕೊಳ್ಳಲು ಡ್ರಾಮಾ ಮಾಡುತ್ತಿದ್ದಾರೆ. ಬಿಜೆಪಿಯವರು ಸಿ.ಟಿ.ರವಿ ಪರ ನಿಂತಿರುವುದು ನಾಚಿಕೆಗೇಡಿನ ಸಂಗತಿ. ಸಿ.ಟಿ. ರವಿ ಅವರನ್ನು ಪೊಲೀಸರು ಎನ್‌ಕೌಂಟರ್ ಮಾಡಲು ಯತ್ನಿಸಿದರು, ಕೊಲೆ ಮಾಡುವ ಪ್ರಯತ್ನ ನಡೆದಿತ್ತು ಎಂಬುದೆಲ್ಲಾ ಶುದ್ಧ ಸುಳ್ಳು. ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲಾ ಬರೀ ನಾಟಕ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ನಕಲಿ ಎನ್‌ಕೌಂಟರ್ ಮಾಡಲು ಪ್ಲಾೃನ್ ಆಗಿತ್ತು ಎಂಬ ಪ್ರಲ್ಹಾದ್ ಜೋಷಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ತಪ್ಪು ಮಾಡಿದವರು ಮಾತ್ರ ಇಂಥ ಸುಳ್ಳುಗಳನ್ನು ಹುಡುಕುತ್ತಾರೆ. ಸಿ.ಟಿ. ರವಿ ವಿಚಾರದಲ್ಲಿ ಬಿಜೆಪಿ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಕಿಡಿಕಾರಿದರು.