

ಸಾಹಿತ್ಯ ಜೀವ ಪರ ಹಾಗೂ ಜನ ಪರವಾಗಿದ್ದರೆ ಮೌಲ್ಯ ಹೆಚ್ಚು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ. ಶಿವಸ್ವಾಮಿ ಹೇಳಿದರು.
ಬೋಗಾದಿಯ ಸನ್ವಿತಿ ಪ್ರಕಾಶನವು ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕೃತಿ ಲೋಕಾರ್ಪಣೆ, ಕನ್ನಡ ಕಾವ್ಯಸಂಭ್ರಮ ಹಾಗೂ ರಾಜ್ಯ ಮಟ್ಟದ ಸನ್ವಿತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಮಾನವೀಯ ಮೌಲ್ಯಗಳು ಕೂಡ ಹೆಚ್ಚಾಗುತ್ತವೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದೆ. ಇದರಿಂದಾಗಿ ಭಯದ ವಾತಾವರಣ ಉಂಟಾಗಿದೆ. ಇದು ನಿವಾರಣೆ ಆಗಬೇಕಾದರೆ ಅಕ್ಷರಗಳ ಮೂಲಕ ಅರಿವು ಮೂಡಿಸಬೇಕಾಗಿದೆ, ಸಾಮರಸ್ಯ, ಸಮಾನತೆಯ ಸಮಾಜ ನಿರ್ಮಾಣವಾಗಬೇಕಾಗಿದೆ ಎಂದು ಅವರು ಹೇಳಿದರು.
ಬದುಕನ್ನು ಶ್ರೀಮಂತಿಕೆ, ಅಂತಸ್ತಿನಿಂದ ಅಳೆಯುವುದಲ್ಲ. ಮಾನವೀಯ ಮೌಲ್ಯಗಳಿಂದ ಅಳೆಯಬೇಕು.ಆ ರೀತಿಯ ಸಾಹಿತ್ಯ ಕೃಷಿ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಸಾಹಿತ್ಯ ಓದುವುದು ಉತ್ತಮ ಕಾರ್ಯ. ಏಕೆಂದರೆ ಅಕ್ಷರ ಜ್ಞಾನದಿಂದ ಅರಿವು ಉಂಟಾಗುತ್ತದೆ. ಶಿಕ್ಷಣದಿಂದಾಗಿ ಪ್ರತಿಯೊಬ್ಬರೂ ಸಾಹಿತ್ಯ ಓದಿ, ಅರಿತು ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಸಾಹಿತ್ಯ ರಚನೆ ಕೂಡ ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಯಾರಿಗೆ ಅಧ್ಯಯನ, ಆಸಕ್ತಿ ಇದೆಯೋ ಅವರಿಗೆ ಸಿದ್ದಿಸುತ್ತದೆ ಎಂದ ಅವರು, .ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಶಕ್ತಿ, ತಾಕತ್ತು ಇದೆ. ಆದ್ದರಿಂದಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುಕರ್ ಪ್ರಶಸ್ತಿ ಕೂಡ ದೊರೆತಿದೆ. ಇನ್ನೂ ಹೆಚ್ಚಾಗಿ ಕನ್ನಡ ಸಾಹಿತ್ಯ ಬೆಳೆಯಬೇಕು ಎಂದರು.
ಪ್ರತಿಯೊಂದು ಮನೆಯಲ್ಲಿಯೂ ಗ್ರಂಥ ಭಂಡಾರ ಇರಬೇಕು. ಪೋಷಕರು ಕೂಡ ಮಕ್ಕಳಿಗೆ ಕೈಗೆ ಮೊಬೈಲ್ ಕೊಡುವ ಬದಲು ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು. ಇದರಿಂದ ಸಾಧನೆ ಮಾಡಲು ಅನುಕೂಲವಾಗುತ್ತದೆ.
ಬಿಡುವಿನ ವೇಳೆ ಮಕ್ಕಳೊಂದಿಗೆ ಸಂವಹನ ನಡೆಯಬೇಕು. ಆಗ ಮಾತ್ರ ಮಾನವೀಯ ಸಂಬಂಧ, ಜೀವನ ಸಂಬಂಧ, ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯ ಎಂದರು.