

ಉದಯಗಿರಿಯಲ್ಲಿ ಕಲ್ಲು ತೂರಾಟ ಘಟನೆ ನಡೆದ ಸೋಮವಾರ ರಾತ್ರಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು. ಘಟನೆ ನಡೆಯಬಾರದಿತ್ತು, ನಡೆದಿದೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಸ್ಥಳೀಯ ಮುಖಂಡರು ಪೊಲೀಸ್ ಇಲಾಖೆ ಜತೆಗೆ ಕೈಜೋಡಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಈಗ ಉದಯಗಿರಿ ಸಹಜ ಸ್ಥಿತಿಗೆ ಬಂದಿದೆ. ಪೊಲೀಸ್ ಇಲಾಖೆ ಸಿಸಿ ಕ್ಯಾಮರಾ ಫೂಟೇಜಸ್ ನೋಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಲ್ಲು ತೂರಾಟ ನಡೆಸಿದದ್ದವರನ್ನು ಪೊಲೀಸರು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೆ ಕೆಲವರನ್ನು ಬಂಧಿಸಿದ್ದಾರೆ. ಯಾರೇ ತಪ್ಪು ಮಾಡಿದರೂ ಕಾನೂನಿನ ಅಡಿ ಕ್ರಮ ಜರುಗಿಸಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೊಲೀಸ್ ವಿಚಾರಣೆಯಲ್ಲಿ ನಾನು ಮಧ್ಯೆಪ್ರವೇಶ ಮಾಡಲ್ಲ. ಆದರೆ ಅಮಾಯಕರಿಗೆ ತೊಂದರೆ ಆಗಬಾರದು. ಈ ಘಟನೆಗೆ ಮೂಲ ಕಾರಣ ಯಾರು? ಆ ಪೋಸ್ಟ್ ಹಾಕಿದ್ದು ಯಾರು? ಸಿದ್ಧಪಡಿಸಿದ್ದು ಯಾರು? ಅಂತಹವರನ್ನು ಪತ್ತೆ ಹಚ್ಚಿ ಅಂತ ಹೇಳಿದ್ದೇನೆ ಎಂದು ತಿಳಿಸಿದರು.
ಪೋಸ್ಟ್ ವಿರುದ್ಧ ದೂರು ನೀಡಿದ ಬಳಿಕವೂ ಎಫ್‌ಐಆರ್ ಹಾಕಲು ಪೊಲೀಸರು ವಿಳಂಬ ಮಾಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಧರ್ಮದ ಬಗ್ಗೆ ಅವಹೇಳನ ಮಾಡಿರುವುದಕ್ಕಾಗಿ ವಿಕೋಪಕ್ಕೆ ಹೋಗಿದೆ. ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪಾಗಿದೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಅಮಾಯಕರಿಗೆ ತೊಂದರೆ ಕೊಡಬೇಡಿ ಅಂತನೂ ಹೇಳಿದ್ದೇನೆ. ಪ್ರಚೋದನೆ ಕೊಟ್ಟಿದ್ದರೆ ಅವರ ಮೇಲೆ ಕೂಡ ಕ್ರಮ ಆಗಲಿ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದರು.