

ಪಿರಿಯಾಪಟ್ಟಣ: ಸಾಲುಮರದ ತಿಮ್ಮಕ್ಕ ಅವರ ಆದರ್ಶ ಜೀವನವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಯೋಜನಾಧಿಕಾರಿ ಸುರೇಶ್ ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಐಟಿಸಿ, ಮೈರಾಡ ಮತ್ತು ಗ್ರಾಪಂ ಸಹಯೋಗದಲ್ಲಿ ಮಂಗಳವಾರ ತಾಲೂಕಿನ ಮಾಲಂಗಿ ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದಲ್ಲಿ ಎದುರಾಗುತ್ತಿರುವ ಅಸಮತೋಲನದ ಬಗ್ಗೆ ನಾವೆಲ್ಲರೂ ಈಗಿನಿಂದಲೇ ಎಚ್ಚೆತ್ತುಕೊಂಡು ಮನೆಗೆ ಒಂದು ಮರ ಊರಿಗೊಂದು ವನ ಎಂಬ ಘೋಷವಾಕ್ಯದಂತೆ ನಡೆದುಕೊಂಡು ಪರಿಸರ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕಿದೆ. ನಾವೆಲ್ಲರೂ ಉಸಿರಾಡಲು ಬಳಸುವ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಹೆಚ್ಚು ಗಿಡಗಳನ್ನು ಬೆಳೆಸಬೇಕಿದೆ ಎಂದರು.
ಉಪವಲಯ ಅರಣ್ಯಾಧಿಕಾರಿ ಶುಭಾ, ಮೈಕ್ಯಾಪ್ ಸಂಸ್ಥೆ ಕಾರ್ಯನಿರ್ವಾಹಕಾಧಿಕಾರಿ ಆಸ್ರಾಫ್ ಹಸನ್, ಮಾಲಂಗಿ ಗ್ರಾಪಂ ಪಿಡಿಒ ಆಶಾ ಮಾತನಾಡಿದರು. ಆಶ್ರಮ ಶಾಲೆ ಆವರಣದಲ್ಲಿ ಗಿಡ ನೆಡಲಾಯಿತು. ಬಳಿಕ ಸದಸ್ಯರಿಗೆ ಗಿಡ ವಿತರಿಸಲಾಯಿತು. ಸ್ಥಳೀಯ ಸದಸ್ಯರು ಅರಣ್ಯ ಗಿಡಗಳ ಬೀಜಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟು ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಸಂಸ್ಥೆಯ ಮೇಲ್ವಿಚಾರಕ ಸುಧಾಕರ್, ಸೇವಾ ಪ್ರತಿನಿಧಿ ಸರಸ್ವತಿ, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಇದ್ದರು.