ಸಾಲಬಾಧೆಯಿಂದ ರೈತ ಆತ್ಮಹತ್ಯೆ

IMG-20220922-WA0114
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಸ್ವಾಮಿಗೌಡ.
Published on


ಹನಗೋಡು: ಹೋಬಳಿಯ ಚಿಲ್ಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪಲು ಗ್ರಾಮದಲ್ಲಿ ಸಾಲಬಾಧೆಯಿಂದ ರೈತ ನೇಣು ಬಿಗಿದುಕೊಂಡು ಬುಧವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಗ್ರಾಮದ ನಿವಾಸಿ ಲೇ. ನೀಲೇಗೌಡ ಎಂಬುವರ ಪುತ್ರ ಸ್ವಾಮಿಗೌಡ (64) ಆತ್ಮಹತ್ಯೆ ಮಾಡಿಕೊಂಡವರು. ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ.


ಸ್ವಾಮಿಗೌಡರ ಹೆಸರಿನಲ್ಲಿ 3 ಎಕರೆ ಜಮೀನಿದ್ದು, ಹೊಗೆ ಸೊಪ್ಪು ಬೆಳೆ ಬೆಳೆಯುತ್ತಿದ್ದರು. ವ್ಯವಸಾಯಕ್ಕಾಗಿ ಹುಣಸೂರಿನ ಐಒಬಿ ಬ್ಯಾಂಕ್‌ನಲ್ಲಿ 7.5 ಲಕ್ಷ ರೂ., ಎಲ್ ಆ್ಯಂಡ್ ಟಿಯಲ್ಲಿ 4 ಲಕ್ಷ ರೂ. ಟ್ರಾೃಕ್ಟರ್ ಸಾಲ, ಮೈಕ್ರೋ ಫೈನಾನ್ಸ್‌ನಲ್ಲಿ ಮನೆ ಮೇಲೆ 6 ಲಕ್ಷ ರೂ. ಸಾಲ ಪಡೆದಿದ್ದಾರೆ.

ಎರಡು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದು, ಇದರಿಂದ ಖಿನ್ನತೆಗೆ ಒಳಗಾಗಿದ್ದರು. ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪುತ್ರ ಕುಮಾರ್ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂತ್ಯಕ್ರಿಯೆ ಗುರುವಾರ ಸಂಜೆ ಜಮೀನಿನಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net