ಸಾರಿಗೆ ವ್ಯವಸ್ಥೆ ಕಲ್ಪಿಸಲು ಹೆಚ್ಚಿದ ಬೇಡಿಕೆ

vemgal bus
ಕೆಎಸ್​ಆರ್​ಟಿಸಿ ಬಸ್​.
Published on

* ಆರ್​.ಮುನಿರಾಜು ವೇಮಗಲ್​

ವೇಮಗಲ್​ ಪಟ್ಟಣದಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಸಂಚರಿಸುತ್ತಿದ್ದ ಬಸ್​ಗಳನ್ನು ನಿಲ್ಲಿಸಲಾಗಿದ್ದು, ಅದಕ್ಕೆ ಮರು ಚಾಲನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವೇಮಗಲ್​ ಗ್ರಾಮ ಪಂಚಾಯಿತಿಯನ್ನು ಕುರಗಲ್​&ವೇಮಗಲ್​ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜಗೇರಿಸಲಾಗಿದೆ. ಈ ಭಾಗದಲ್ಲಿ ಪ್ರತಿಷ್ಠಿತ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇದಕ್ಕೆ ತಕ್ಕಂತೆ ಜನ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಈ ಭಾಗದಿಂದ ಬೆಂಗಳೂರು, ಹೋಸಕೋಟೆ, ದೇವನಹಳ್ಳಿ, ಚಿಂತಾಮಣಿ ಭಾಗಕ್ಕೆ ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಶಾಲಾ&ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಹ ಹೆಚ್ಚಾಗಿದ್ದಾರೆ. ಈ ಹಿಂದೆ ವೇಮಗಲ್​ನಿಂದ ಬೆಂಗಳೂರಿಗೆ ಹಾಗೂ ವೇಮಗಲ್​ನಿಂದ ಮದ್ದೇರಿ ಮಾರ್ಗವಾಗಿ ಚಿಂತಾಮಣಿಗೆ ನೇರ ಬಸ್​ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋವಿಡ್​ ನಂತರ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಸ್ವಂತ ವಾಹನಗಳಲ್ಲಿಯೇ ತೆರಳಬೇಕಾಗಿತ್ತು. ವಾಹನಗಳ ವ್ಯವಸ್ಥೆ ಇಲ್ಲದೆ ಇರುವವರು ಸಿಕ್ಕಿರುವ ಕೆಲಸ ಬಿಟ್ಟು ಸ್ಥಳಿಯವಾಗಿ ಕೆಲಸ ಹುಡುಕಿಕೊಳ್ಳುವ ಅನಿವಾರ್ಯ ಎದುರಾಗಿದೆ.

ಪ್ರತಿದಿನ ವೇಮಗಲ್​ ಪಟ್ಟಣದಿಂದ ನೂರಾರು ಮಹಿಳೆಯರು, ಯುವಕರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಉದ್ಯೋಗಕ್ಕಾಗಿ, ಆಸ್ಪತ್ರೆ, ಸರ್ಕಾರಿ ಕಚೇರಿ, ತೀರ್ಥಯಾತ್ರೆ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಬೆಂಗಳೂರು, ದೇವನಹಳ್ಳಿ, ಚಿಂತಾಮಣಿ ಸೇರಿ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವವರು ಇದ್ದಾರೆ.

ಪ್ರಸ್ತುತ ಬೆಂಗಳೂರಿಗೆ ನೇರ ಬಸ್​ ಸಂಪರ್ಕವಿಲ್ಲದ ಕಾರಣ ವೇಮಗಲ್​ ಹಾಗೂ ಸುತ್ತಮುತ್ತಲಿನ ಜನರು ನರಸಾಪುರ ಮತ್ತು ಎಚ್​.ಕ್ರಾಸ್​ಗೆ ಹೋಗಿ ಮತ್ತೆ ಅಲ್ಲಿ ಬಸ್​ ಬದಲಾಯಿ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ಅಂದುಕೊಂಡ ಸ್ಥಳಕ್ಕೆ ತೆರಳಲು ಹೆಚ್ಚು ಸಮಯಬೇಕಾಗಿದೆ.

ವೇಮಗಲ್​ನಲ್ಲಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪಿಯುಸಿ, ಪದವಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳು ಇವೆ. ಹಳ್ಳಿಗಳಿಂದ ಪಟ್ಟಣಕ್ಕೆ ಬಂದಿರುವವರು ಕೆಲಸ ಮುಗಿಸಿಕೊಂಡು ಮನೆಗಳಿಗೆ ವಾಪಸ್​ ತೆರಳಲೂ ಸಹ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಇರುವುದರಿಂದ ಖಾಸಗಿ ಆಟೋಗಳನ್ನು ಅವಲಂಭಿಸಬೇಕಾಗಿದೆ.

ನಿತ್ಯ ಬೆಳಗ್ಗೆ 6 ಗಂಟೆಯಿಂದ 8ಕ್ಕೆ ವೇಮಗಲ್​ ಗ್ರಾಮದಿಂದ ಬೆಂಗಳೂರಿಗೆ ನೇರ ಬಸ್​ ಕಲ್ಪಿಸಲು ಮತ್ತು ಸದರಿ ಬಸ್​ ಸಂಜೆ 5.30 ಬೆಂಗಳೂರಿನಿಂದ ವೇಮಗಲ್​ಗೆ ಸಂಚರಿಸುವ ಬಸ್​ಗಳ ವ್ಯವಸ್ಥೆ ಮಾಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

* ಸಂಚಾರದಿಂದ ಅನುಕೂಲ

ವೇಮಗಲ್​&ಕುರಗಲ್​ ಪಟ್ಟಣ ಪಂಚಾಯಿತಿ ತಾಲೂಕು ಪಂಚಾಯಿಯಾಗಲು ದಾಪುಗಾಲು ಇಡುತ್ತಿದ್ದು, ಜನರ ಬೇಡಿಕೆಗೆ ತಕ್ಕಂತೆ ಬಸ್​ ಸಂಚಾರದ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೆ ತಂದಾಗ ಹೆಚ್ಚುವರಿ ಬಸ್​ಗಳು ವೇಮಗಲ್​ಗೆ ಸಂಚರಿಸುತ್ತವೆ ಎಂಬ ನಿರೀೆಯಿತ್ತು. ಆದರೂ ಸಹ ಕನಸು ಈಡೇರಲಿಲ್ಲ ಎಂದು ಸ್ಥಳಿಯರು ಅಸಮಾಧಾನ ಹೊರ ಹಾಕಿದ್ದಾರೆ.

* ಎಂಎಲ್​ಎ, ಎಂಎಲ್ಸಿಗೂ ಮನವಿ

ವೇಮಗಲ್​ ಪಟ್ಟಣದಿಂದ ಬೆಂಗಳೂರು, ದೇವನಹಳ್ಳಿ, ಎಚ್​.ಕ್ರಾಸ್​, ಚಿಕ್ಕಬಳ್ಳಾಪುರ, ಚಿಂತಾಮಣಿ, ಕೈವಾರ ಸೇರಿ ಹಲವು ಪ್ರಮುಖ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರದೇಶವಾಗಿದೆ. ಜತೆಗೆ ಸೀತಿ, ಕೈವಾರ ಪುಣ್ಯ ಕ್ಷೇತ್ರಗಳಿಗೆ ತೆರಳಬೇಕಾದರೆ ವೇಮಗಲ್​ ಮೂಲಕವೇ ಹೋಗಬೇಕು. ಆದ ಕಾರಣ ವೇಮಗಲ್​ನಿಂದ ಪ್ರತ್ಯೇಕ ಬಸ್​ ಸಂಚಾರದ ವ್ಯವಸ್ಥೆ ಮಾಡಬೇಕು ಎಂದು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದ ಶಾಸಕ ಕೊತ್ತೂರು ಜಿ.ಮಂಜುನಾಥ್​, ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಅವರಿಗೂ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್​...

ಮಹಿಳೆಯರು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ವೇಮಗಲ್​ನಿಂದ ಬೆಂಗಳೂರಿಗೆ ಬಸ್​ಗಳನ್ನು ಬದಲಾಯಿಸಿಕೊಂಡು ಹೋಗುವುದು ಕಷ್ಟ. ಎಚ್​.ಕ್ರಾಸ್​ ಮಾರ್ಗದಲ್ಲಿ ಪ್ರಯಾಣಿಕರು ಹೆಚ್ಚು ಇರುವುದರಿಂದ ಬಸ್​ಗಳಲ್ಲಿ ಒತ್ತಡ ಜಾಸ್ತಿ ಇರುತ್ತದೆ. ವೇಮಗಲ್​ನಿಂದಲೇ ನೇರ ಬಸ್​ ವ್ಯವಸ್ಥೆ ಮಾಡಬೇಕು.

> ಪುರಹಳ್ಳಿ ಜಿ.ಯಲ್ಲಪ್ಪ, ಕರ್ನಾಟಕ ದಲಿತ ನಾಗರಿಕ ಸುಮಿತಿ ಅಧ್ಯಕ್ಷ, ವೇಮಗಲ್​

ಕೋಟ್​...

ವೇಮಗಲ್​ ಭಾಗದಲ್ಲಿ ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಿವೆ. ಜನಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ನಿತ್ಯ ಬೆಂಗಳೂರಿಗೆ ನಾನಾ ಕೆಲಸ ಕಾರ್ಯಗಳಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದು, ಬೆಂಗಳೂರಿಗೆ ನೇರ ಬಸ್​ ಅತ್ಯವಶ್ಯಕವಾಗಿದೆ. ಈ ಕುರಿತು ಮಾಜಿ ಸಭಾಪತಿ ವಿ. ಆರ್​.ಸದರ್ಶನ್​ ಅವರ ಮೂಲಕ ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​, ಶಾಸಕ ಕೊತ್ತೂರು ಜಿ.ಮಂಜುನಾಥ್​ ಗಮನಕ್ಕೂ ತರಲಾಗಿದೆ.

> ಸಿ.ಅರುಣ್​ ಕುಮಾರ್​, ಉಪ ಮಂಡಲ ಅಭಿಯಂತರ, ಬಿ.ಎಸ್​.ಎನ್​.ಎಲ್​, ವೇಮಗಲ್​

ಕೋಟ್​...

ಶಕ್ತಿ ಯೋಜನೆ ಜಾರಿ ಅದಾಗಿನಿಂದ ಬಸ್​ ಮಾರ್ಗಗಳಿಗೆ ಹೆಚ್ಚು ಬೇಡಿಕೆಯಾಗಿದ್ದು, ಅದರ ಪ್ರಕಾರ ಬಸ್​ಗಳ ವ್ಯವಸ್ಥೆ ಮಾಡಲಾಗುತ್ತಿದೆ. ವೇಮಗಲ್​ ಸ್ಥಳಿಯರ ಮನವಿ ಪರಿಶೀಲಿಸಿ ಕ್ರಮವಹಿಸಲಾಗುವುದು.

> ಎನ್​.ಶ್ರೀನಾಥ್​, ವಿಭಾಗೀಯ ನಿಯಂತ್ರಣಾಧಿಕಾರಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net