ಸಾರಿಗೆ ನೌಕರರಿಗೆ ದಶಕದ ಬೇಡಿಕೆ ಈಡೇರಿದ ಸಂತೃಪ್ತಿ: ಸಿಎಂ ಸಿದ್ದರಾಮಯ್ಯ | Cashless medical facility for KSRTC employees

KSRTC Health card
Published on

ಬೆಂಗಳೂರು: ನಗದುರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕೆಂಬ ಸಾರಿಗೆ ನಿಗಮದ ನೌಕರರ ಬಹು ವರ್ಷಗಳ ಬೇಡಿಕೆ ಈಡೇರಿದ್ದು, ಸಿಬ್ಬಂದಿಗೂ ಸಂತೃಪ್ತಿ ತಂದಿದೆ. ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಲು ದುಡಿಯುತ್ತಿರುವ ನೌಕರರ ಆರೋಗ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಆರೋಗ್ಯ ಯೋಜನೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು 275 ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆಸ್ಪತ್ರೆಗಳು ಸೇರಲಿವೆ. ಸಿಬ್ಬಂದಿ ಕರ್ತವ್ಯನಿರತ ಊರು, ಅವರ ಕುಟುಂಬದವರು ನೆಲೆಸಿರುವ ಊರಿನಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ತಿರಸ್ಕಾರ ಮನೋಭಾವ ಕೂಡದು

ಹಣ ಪಾವತಿಸಿ ಚಿಕಿತ್ಸೆ ಪಡೆಯುವ ರೋಗಿಗಳ ರೀತಿಯಲ್ಲಿ ಸಾರಿಗೆ ನಿಗಮದ ನೌಕರರನ್ನು ಪರಿಗಣಿಸಬೇಕು. ನಗದುರಹಿತ ವೈದ್ಯಕೀಯ ಚಿಕಿತ್ಸಾ ಕಾರ್ಡ್ ಹೊಂದಿದ್ದಾರೆ ಎಂಬ ಕಾರಣಕ್ಕೆ ನೌಕರರನ್ನು ಆಸ್ಪತ್ರೆಗಳು ತಿರಸ್ಕಾರ ಮನೋಭಾವದಿಂದ ನೋಡಕೂಡದು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿ ನೌಕರರಿಗೆ ಈ ಯೋಜನೆ ಜಾರಿಯಾಗಿದೆ. ಮುಂದಿನ ಮೂರು ತಿಂಗಳೊಳಗೆ ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೂ ಅನ್ವಯವಾಗಲಿದೆ ಎಂದು ತಿಳಿಸಿದರು.

ಮಹತ್ವದ ಬದಲಾವಣೆ

ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ, ಮಾಸಿಕ ಎರಡು ಸಾವಿರ ರೂ. ಭತ್ಯೆ ನೀಡುವ ‘ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಬದುಕಿನಲ್ಲಿ ಪರಿಣಾಮಕಾರಿ ಬದಲಾವಣೆ ತಂದಿವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದರು.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಯೋಜನೆಗಳೆರಡು ಮಹಿಳೆಯರಿಗೆ ಆರ್ಥಿಕ ಚೈತನ್ಯ ತುಂಬಿವೆ. ಉಚಿತ ಪ್ರಯಾಣದಿಂದ ಉಳಿದ ಹಣ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಲು ನೆರವಾಗಿದೆ.

ಹಾಗೆಯೇ ಮಾಸಿಕ ಎರಡು ಸಾವಿರ ರೂ. ಭತ್ಯೆಯು ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದು, ಆರ್ಥಿಕವಾಗಿ ಸಬಲಗೊಳಿಸಿದೆ. ಆ ಮೂಲಕ ಲಿಂಗ ತಾರತಮ್ಯ ನಿವಾರಣೆ, ಆರ್ಥಿಕತೆ ವೃದ್ಧಿಗೂ ಪ್ರಯೋಜನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಾರ್ಷಿಕ 46 ಕೋ.ರೂ. ವೆಚ್ಚ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಕೆಎಸ್‌ಆರ್‌ಟಿಸಿಯ 34 ಸಾವಿರ ನೌಕರರಿಗೆ ಆರೋಗ್ಯ ಯೋಜನೆ ಸೌಲಭ್ಯ ಒದಗಿಸಲಾಗುತ್ತದೆ. ನೌಕರರು ಮಾಸಿಕ 650 ರೂ.ನಂತೆ ವಾರ್ಷಿಕ 26 ಕೋಟಿ ರೂ.ಗಳನ್ನು ಭರಿಸಲಿದ್ದಾರೆ.

ನಿಗಮವು ವಾರ್ಷಿಕ 20 ಕೋಟಿ ರೂ. ತುಂಬಿಕೊಡಲಿದೆ. ಉದ್ಯೋಗಿ, ಪತ್ನಿ/ಪತಿ, ತಂದೆ-ತಾಯಿ, ಅವಲಂಬಿತ ಮಕ್ಕಳ ಎಲ್ಲ ಕಾಯಿಲೆಗಳಿಗೆ ನಗದುರಹಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಕೆಎಸ್‌ಆರ್‌ಟಿಸಿಯೊಂದಿಗೆ ಸದ್ಯಕ್ಕೆ 275 ಆಸ್ಪತ್ರೆಗಳು ಒಡಂಬಡಿಕೆ ಮಾಡಿಕೊಂಡಿದ್ದು, ಇನ್ನೂ 25 ಖಾಸಗಿ ಆಸ್ಪತ್ರೆಗಳು ಸೇರಲಿವೆ. ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಿಗೂ ಒಪ್ಪಂದ ಮಾಡಿಕೊಳ್ಳಲು ಮನವಿ ಮಾಡಲಾಗಿದೆ ಎಂದರು.

ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸುವ ಈ ಯೋಜನೆಯು ಉಳಿದ ಮೂರು ನಿಗಮಗಳಲ್ಲಿ ಮುಂದಿನ ಮೂರು ತಿಂಗಳೊಳಗೆ ಅನುಷ್ಠಾನಕ್ಕೆ ಬರಲಿದೆ. 24 ಡಯಾಗ್ನಸ್ಟಿಕ್ ಸೆಂಟರ್ ಹಾಗೂ ಆರು ಆಯುರ್ವೇದ ಆಸ್ಪತ್ರೆಗಳು ಒಡಂಬಡಿಕೆ ಪಟ್ಟಿಗೆ ಸೇರಿವೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಗುಬ್ಬಿ ಶ್ರೀನಿವಾಸ, ಶಾಸಕರಾದ ಅಶೋಕ್ ಪಟ್ಟಣ, ನಯನಾ ಮೋಟಮ್ಮ, ಮಾಜಿ ಶಾಸಕ ರಮೇಶ್‌ಕುಮಾರ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net