ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯ ರಸ್ತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳು ಕೆಎಸ್ಸಾರ್ಟಿಸಿ ಡಿಪೋ ಮುಂಭಾಗ ಡಿಸಿಎಂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಶನಿವಾರ ಪ್ರತಿಭಟನೆ ವ್ಯಕ್ತಪಡಿಸಿದವು.
ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‍ಗಳಲ್ಲಿ ರ್ಯಾಲಿ ನಡೆಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಡಿಪೊ ಮುಂಭಾಗ ಜಮಾಯಿಸಿದರಲ್ಲದೆ ನೌಕರರ ಬೇಡಿಕೆ ಈಡೇರಿಸುವ ಸಂಬಂಧ ಪ್ರಯತ್ನ ನಡೆಸುವ ಬದಲು ಬದಲು ಎಸ್ಮಾ ಕಾಯ್ದೆ ಜಾರಿ, ಖಾಸಗಿ ಚಾಲಕರನ್ನು ಬಿಎಂಟಿಸಿ, ಕೆಎಸ್‍ಆರ್‍ಟಿಸಿಗೆ ಕರೆಸಿಕೊಂಡು ಕೆಲಸ ಚಾಲನೆ ಮಾಡುತ್ತೇವೆ ಎಂದು ಬೆದರಿಸುತ್ತಿರುವುದು ಪ್ರಜಾ ಪ್ರಭುತ್ವದ ಕಗ್ಗೊಲೆ ಎಂದು ರೈತ ಸಂಘದ ಮುಖಂಡ ಕೆ. ನಾರಾಯಣಗೌಡ ಆರೋಪಿಸಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದರು. ಈಗ ಅವರದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ತಪ್ಪಿದ ಮುಖ್ಯಮಂತ್ರಿಯಾಗಿ, ರೈತ, ಕಾರ್ಮಿಕ, ದಲಿತ ವಿರೋಧಿ,ಅಧಿಕಾರಕ್ಕೋಸ್ಕರ ಏನೂ ಬೇಕದರೂ ಮಾಡುವ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶೋಭೆ ತರುವಂತಹದ್ದಲ್ಲ.ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು.ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಮುಖಂಡ ಕಲ್ವಮಂಜಲಿ ರಾಮು ಶಿವಣ್ಣ ಎಚ್ಚರಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜಯದೇವ ಪ್ರಸನ್ನ, ಜಿ.ನಾರಾಯಣಸ್ವಾಮಿ, ನಳಿನಿಗೌಡ, ಚಂಬೆ ರಾಜೇಶ್, ತ್ಯಾಗರಾಜ್, ಸೋಮಶೇಖರ್,ಶೇಷಾದ್ರಿ ಶಾಸ್ತ್ರಿ, ಮುನಿಕೃಷ್ಣ, ಗೋಪಾಲಕೃಷ್ಣಮೂರ್ತಿ, ದೊಡ್ಡಕುರುಬರಹಳ್ಳಿ ಶಂಕರಪ್ಪ, ಮುಳಬಾಗಿಲು ಎಲ್.ಎನ್.ಬಾಬು, ಆನಂದ್,ಸೈಯದ್ ಪಿರ್ದೋಸ್ ಭಾಗಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net