ಸಾರಿಗೆ ಇಲಾಖೆಗೆ 1200 ಕೋಟಿ ರೂ. ನಷ್ಟವಾಗಿದ್ರೂ ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ

kstrc karnatka
Published on

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಸಾರಿಗೆ ಇಲಾಖೆಗೆ ಒಟ್ಟಾರೆ 1,200 ಕೋಟಿ ರೂ. ನಷ್ಟವಾಗಿದೆ. ಆದರೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನಕ್ಕೆ ಸಮಸ್ಯೆಯಾಗದಂತೆ ಸರ್ಕಾರದಿಂದಲೇ ಪಾವತಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 24/7 ನ್ಯೂಸ್ ಚಾನಲ್​ನಿಂದ ಮಂಗಳವಾರ ನಡೆದ ಫೋನ್ ಇನ್ ಮತ್ತು ಸಂವಾದದಲ್ಲಿ ಮಾತನಾಡಿದ ಅವರು, ಸಾರಿಗೆ ಸಂಚಾರ ಸ್ತಬ್ಧವಾಗಿದ್ದರೂ ಸಂಬಳ ಇನ್ನಿತರ ವೆಚ್ಚಗಳ ನಿಲುಗಡೆ ಸಾಧ್ಯವಾಗದು. ನೌಕರರಿಗೆ ಸಂಬಳ ಪಾವತಿಗೆ ಮಾಸಿಕ 340 ಕೋಟಿ ರೂ. ಬೇಕಾಗುತ್ತದೆ. ಒಟ್ಟಿಗೆ 3 ತಿಂಗಳಿಗೆ 1,050 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯಕ್ಕೆ 1 ತಿಂಗಳ ವೇತನ ಪಾವತಿಗೆ ಸಿಎಂ ತಾತ್ವಿಕ ಅನುಮತಿ ನೀಡಿದ್ದಾರೆ ಎಂದು ಸವದಿ ತಿಳಿಸಿದರು.

ನಷ್ಟದ ಹೊರೆ: ಸೇವಾ ಸಂಸ್ಥೆಗೆ ಆದಾಯವೆ ಮುಖ್ಯವಲ್ಲ. ಏ.13ರವರೆಗೆ ಕೆಎಸ್​ಆರ್​ಟಿಸಿಯ ನಾಲ್ಕು ನಿಗಮಗಳಿಂದ ಒಟ್ಟು 700 ಕೋಟಿ ರೂ., ವಾಹನಗಳ ನೋಂದಣಿ ಹಾಗೂ ಮುದ್ರಾಂಕ ಮತ್ತಿತರ ಶುಲ್ಕಗಳ ರೂಪದಲ್ಲಿ 500 ಕೋಟಿ ರೂ. ಸೇರಿ 1,200 ಕೋಟಿ ರೂ. ಹಾನಿಯಾಗಿದ್ದು, ಮೇ 3ರವರೆಗೆ ಲೆಕ್ಕ ಹಾಕಿದರೆ ಈ ನಷ್ಟ ದುಪ್ಪಟ್ಟಾಗಲಿದೆ.

ಜನದಟ್ಟಣೆ ಇರುವ ಇಲಾಖೆಯಾದ್ದರಿಂದ ಲಾಕ್​ಡೌನ್ ನಂತರ ಎಲ್ಲವೂ ಯಥಾಸ್ಥಿತಿಗೆ ಬರಲು ಮತ್ತಷ್ಟು ಕಾಲಾವಕಾಶ ಹಿಡಿಯಲಿದ್ದು, ಈ ನಷ್ಟದಲ್ಲಿ ಅದೂ ಸೇರಿಕೊಳ್ಳಲಿದೆ. ಬೊಕ್ಕಸಕ್ಕೆ ಆದಾಯ ತರುವ ಮೂಲಗಳಲ್ಲಿ ಸಾರಿಗೆ ಇಲಾಖೆ ಒಂದಾಗಿದ್ದರಿಂದ ಚಿಂತೆಯಾಗಿರುವುದು ಸಹಜ.

ಹಸಿವಿನಿಂದ ಬಳಲಬಾರದು: ಪಡಿತರ ಹಂಚಿಕೆ, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಸಾಗಣೆ ಹಾಗೂ ವಹಿವಾಟಿಗೆ ಸಂಬಂಧಿಸಿದ ಪ್ರಶ್ನೆಗಳು ಫೋನ್ ಇನ್​ನಲ್ಲಿ ಸಾರ್ವಜನಿಕರಿಂದ ಹರಿದಬಂದವು. ಇವೆಲ್ಲವುಗಳಿಗೆ ಸವದಿ ಪ್ರತಿಕ್ರಿಯಿಸಿ, ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎನ್ನುವುದು ಸರ್ಕಾರದ ದೃಢ ಸಂಕಲ್ಪವಾಗಿದೆ. ಪಡಿತರ ಸಮರ್ಪಕ ವಿತರಣೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಪಡಿತರ ಚೀಟಿ ಇಲ್ಲದವರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಅರ್ಜಿ ಪಡೆದು ಪಡಿತರ ವಿತರಿಸಲು ಆದೇಶಿಸಲಾಗಿದೆ. ಯಾವುದೇ ದೂರು ಬಂದರೂ ತಕ್ಷಣ ಸ್ಪಂದಿಸುವ ವ್ಯವಸ್ಥೆಯಾಗಿದ್ದು, ಸಾರ್ವಜನಿಕರ ಕುಂದು ಕೊರತೆಗೆ ಸ್ಪಂದಿಸಲು ಸಾರಿಗೆ ಇಲಾಖೆ ಸಹಾಯವಾಣಿ (ಫೋನ್ ನಂಬರ್ 080 22236698, ಮೊಬೈಲ್ 9449863214) ವ್ಯವಸ್ಥೆ ಮಾಡಿದೆ. ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಸಾಗಣೆ ಹಾಗೂ ವಹಿವಾಟಿನ ಅಡೆತಡೆ ನಿವಾರಿಸಿದೆ. ದ್ರಾಕ್ಷಿ, ನಿಂಬೆ ಹಾಗೂ ದಾಳಿಂಬೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ಮಹಾರಾಷ್ಟ್ರ ಸರ್ಕಾರದ ಜತೆ ಮಾತನಾಡಿ ನಿರ್ಬಂಧ ಸಡಿಲಗೊಳಿಸಿದ್ದಲ್ಲದೆ, ವಾಹನಗಳ ವ್ಯವಸ್ಥೆ ಮಾಡಿದ್ದರ ನಿದರ್ಶನವನ್ನು ಡಿಸಿಎಂ ನೀಡಿದರು.

ರೋಡ್ ಟ್ಯಾಕ್ಸ್ ವಿನಾಯಿತಿ ಚಿಂತನೆ

ಖಾಸಗಿ ಬಸ್​ಗಳಿಗೆ ಲಾಕ್ ಡೌನ್ ಅವಧಿಯ ರೋಡ್ ಟ್ಯಾಕ್ಸ್​ಗೆ ವಿನಾಯಿತಿ ನೀಡುವ ಚಿಂತನೆ ನಡೆಸಿದ್ದು, ಮುಖ್ಯಮಂತ್ರಿ ಜತೆ ರ್ಚಚಿಸಿ ಸೂಕ್ತ ಕ್ರಮವಹಿಸಲಾಗುವುದು. ಖಾಸಗಿ ಬಸ್​ಗಳ ಮಾಲೀಕರು 6 ತಿಂಗಳ ತೆರಿಗೆಗೆ ವಿನಾಯಿತಿ ನೀಡಲು ಮನವಿ ಮಾಡಿದ್ದಾರೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಸಿದ್ದರಾಮಯ್ಯ ಟೀಕೆ ಸರಿಯಲ್ಲ

ಸಂಕಷ್ಟ ಸಮಯದಲ್ಲಿ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿರುವುದು ಸರಿಯಲ್ಲ, ಇದರಿಂದ ಸಮಾಜಕ್ಕೆ ತಪು್ಪ ಸಂದೇಶ ಹೋಗುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಪಕ್ಷಗಳು ರಾಜಕೀಯ ಮರೆತು ಸರ್ಕಾರದ ಜತೆಯಲ್ಲಿ ನಿಲ್ಲಬೇಕು. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದ್ದನ್ನು ಸಿದ್ದರಾಮಯ್ಯ ಅವರೇ ವಿವರಿಸಿದ್ದರು ಎಂದು ಸವದಿ ನೆನಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂರ್ವ ತಯಾರಿ, ಮುಂದಾಲೋಚನೆ ಕ್ರಮಗಳಿಂದಾಗಿ ರಾಜ್ಯದಲ್ಲಿ ಕರೊನಾ ಸೋಂಕು ಪ್ರಕರಣಗಳು ಕಡಿಮೆಯಿವೆ. ಕರೊನಾ ಮಹಾಮಾರಿ ವಿರುದ್ಧ ಜಯ ಸಾಧಿಸುವುದಕ್ಕೆ ಜಾತಿ, ಧರ್ಮ, ವರ್ಗರಹಿತ, ಪಕ್ಷಾತೀತ ಹೋರಾಟ ಅಗತ್ಯವಾಗಿದ್ದು, ಸಂಕಷ್ಟ ಕಾಲದಲ್ಲಿ ಜನರ ಸಹಕರಿಸಿ, ಸಂಯಮದ ನಡೆಯನ್ನು ಮುಂದುವರಿಸಬೇಕು. | ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿhttps://www.vijayavani.net/mysore-former-mayor-necklace/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net