

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪಾಲಿಕೆ ಕಾಯಂ ಪೌರ ಕಾರ್ಮಿಕರು ಹಾಗೂ ಗುತ್ತಿಗೆ ಪೌರ ಕಾರ್ಮಿಕರು ಸಾಮೂಹಿಕ ರಜೆ ಹಾಕಿ ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಮಂಗಳವಾರ ಮೈಸೂರಿನಲ್ಲೂ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪೌರ ಕಾರ್ಮಿಕರ ಮಹಾ ಸಂಘದ ಕರೆಯ ಮೇರೆಗೆ ಪೌರ ಕಾರ್ಮಿಕರು ಕೆಲಸ ಬಹಿಷ್ಕರಿಸಿ ನಗರಪಾಲಿಕೆ ಕಚೇರಿ ಆವರಣದಲ್ಲಿ ಜಮಾವಣೆಗೊಂಡು ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
7ನೇ ವೇತನ ಆಯೋಗದ ಪರಿಷ್ಕೃತ ವೇತನ ಪಾವತಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ಆರ್ಥಿಕ ಇಲಾಖೆ ಬಿಡುಗಡೆಗೊಳಿಸಬೇಕು. ವೇತನಾನುದಾನಕ್ಕೆ ಶೇ. 85 ರಿಂದ 95 ರಷ್ಟನ್ನು ಮಾತ್ರ ಬಿಡುಗಡೆಗೊಳಿಸಿ, ಉಳಿದುದನ್ನು ಪಾಲಿಕೆ ಕ್ರೋಡೀಕರಿಸಿದ ಸಂಪನ್ಮೂಲದಲ್ಲಿ ಭರಿಸಬೇಕೆಂದು ಪೌರಾಡಳಿತ ಇಲಾಖೆ ನಿರ್ದೇಶನ ಹೊರಡಿಸಿದೆ. ಇದು ಸರಿಯಲ್ಲ. ಒಂದು ವೇಳೆ ನಾಗರಿಕರು ಆಸ್ತಿ ತೆರಿಗೆ ಪಾವತಿಸದಿದ್ದರೆ ವೇತನ ನೀಡಲು ಸಾಧ್ಯವಾಗದು. ಇದು ರದ್ದಾಗಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಸಂಜೀವಿನಿ ಕಾರ್ಯಕ್ರಮವನ್ನು ಪೌರ ಕಾರ್ಮಿಕರಿಗೂ ಅನುಷ್ಠಾನಗೊಳಿಸಬೇಕು, ಕೆಜಿಐಡಿ, ಜಿಪಿಎಫ್ ಮೊದಲಾದ ಸೌಲಭ್ಯ ನೀಡಬೇಕು. ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಬೇಕು. ಮುಂಬಡ್ತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪೌರಕಾರ್ಮಿಕರ ಮಹಾಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ರಾಚಯ್ಯ, ಮಾಜಿ ಉಪಾಧ್ಯಕ್ಷ ಎನ್. ಅರುಣ್‌ಕುಮಾರ್, ಜಿ. ಮಂಜುನಾಥ್, ಎಂ.ರಾಜೀವ್, ಎಲ್‌ಐಸಿ ಮುರುಗೇಶ್, ಮೋಹನ್‌ಕುಮಾರ್ ಇತರರಿದ್ದರು.