

ಜಯಪುರ: ಒಕ್ಕಲಿಗರ ಸಂಘಟನೆ ಮಾಡುತ್ತಿರುವುದು ಇನ್ನಾವುದೋ ಜಾತಿ ಅಥವಾ ಧರ್ಮದ ಸಂಘಟನೆಗಳಿಗೆ ಪ್ರತಿಸ್ಪರ್ಧಿಯಾಗಿ ಅಲ್ಲ. ನಮ್ಮ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಎಂದು ಹೇರೂರು ಯುವ ಒಕ್ಕಲಿಗ ವೇದಿಕೆ ಅಧ್ಯಕ್ಷ ವಿಜೇಂದ್ರ ನಿಡುವಾನೆ ಹೇಳಿದರು.
ಹೇರೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಯುವ ಒಕ್ಕಲಿಗ ವೇದಿಕೆ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮಾಜ ಬಹುಸಂಖ್ಯಾತವಾಗಿದ್ದರೂ ಸಂಘಟನೆಯಲ್ಲಿ ಸದೃಢವಾಗಿಲ್ಲ. ಸಂಘಟಿತರಾಗಿ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದರು.
ವೇದಿಕೆ ಗೌರವಾಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ಯುವಕರೇ ಈ ದೇಶದ ಆಸ್ತಿ. ಸಂಘಟಿತ ಯುವಶಕ್ತಿಯಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಒಕ್ಕಲಿಗ ಸಮಾಜದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ಯುವ ಒಕ್ಕಲಿಗ ವೇದಿಕೆ ಕೆಲಸ ಮಾಡಬೇಕಾಗಿದೆ. ವೇದಿಕೆ ತಾಯಿ ಇದ್ದಂತೆ. ನಮ್ಮೊಳಗಿನ ಭೇದ ಮರೆತು ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ಖಜಾಂಚಿ ನಿರೀಕ್ಷಿತ್ ಮಾತನಾಡಿ, ನಾವು ಆರಂಭಿಸಿರುವ ಸಂಘಟನೆ ಯಾವುದೋ ಲಾಭ, ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ನಮ್ಮ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ಎಂದು ತಿಳಿಸಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವರುಣ್, ಮುಖಂಡ ದೇವಪ್ಪ ಗೌಡ ನಿಡುವಾನೆ ಇದ್ದರು.