

ಬೆಳಗಾವಿ: ಕೂಲಿಕಾರರ ಬದುಕಿಗೆ ಹೊಸರೂಪ ಕಲ್ಪಿಸಿಕೊಟ್ಟ, ಉದ್ಯೋಗಕ್ಕಾಗಿ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿದ ನರೇಗಾ ಯೋಜನೆಯ ಸಾಧನೆ, ಜಲಮೂಲಗಳ ಸಂರಕ್ಷಣೆಯ ಕಾರ್ಯ ಇದೀಗ ‘ಸಾಕ್ಷೃಚಿತ್ರ’ವಾಗಲಿದೆ.
ವರ್ಷಪೂರ್ತಿ ಕೆಲಸ ಪಡೆದುಕೊಂಡು ಬದುಕು ಕಟ್ಟಿಕೊಂಡ ಕೂಲಿಕಾರರ ಜೀವನ ನಿರ್ವಹಣೆ ಮಾಡಿಕೊಂಡ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಕ್ಷೃಚಿತ್ರ ನಿರ್ಮಿಸುತ್ತಲಿದೆ. ನರೇಗಾ ಸಾಧನೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುತ್ತಿರುವ ಕರ್ನಾಟಕ, ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆ ಪಡೆಯಲಿದೆ.
ಹಳ್ಳಿಗಳ ಅಭಿವೃದ್ಧಿ: ನರೇಗಾ ಯೋಜನೆಯಡಿ ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿಗಾಗಿ ಕೈಗೊಂಡಿರುವ ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಗೋ ಕಟ್ಟೆ, ಆಟದ ಮೈದಾನ, ದನದ ಕೊಟ್ಟಿಗೆ, ರಸ್ತೆ, ಬಚ್ಚಲು ಗುಂಡಿ, ಕೃಷಿ ಜಮೀನುಗಳಲ್ಲಿ ಬದು ನಿರ್ಮಾಣ, ಕಾಲು ದಾರಿಗಳ ನಿರ್ಮಾಣ, ಕಾಲುವೆಗಳ ದುರಸ್ತಿ ಹೀಗೆ ಅನೇಕ ಪ್ರಕಾರದ ಅಭಿವೃದ್ಧಿ ಕಾಮಗಾರಿಗಳಿಂದ ಹಳ್ಳಿಗಳಲ್ಲಿ ಅಪಾರ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಇವೆಲ್ಲವುಗಳನ್ನೂ ಸಾಕ್ಷೀಕರಿಸಲು ಕರ್ನಾಟಕ ಸರ್ಕಾರ ‘ಸಾಕ್ಷೃಚಿತ್ರ’ ನಿರ್ಮಿಸುತ್ತಲಿದೆ.
ಕೆಲಸ ಖಾತ್ರಿ: ಕರೊನಾ ಸೋಂಕಿನಿಂದಾಗಿ ಕಳೆದ ವರ್ಷ ಸರ್ಕಾರವು 2 ತಿಂಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿತ್ತು. ಈ ಸಂದರ್ಭದಲ್ಲಿ ನಗರ, ಪಟ್ಟಣ ಪ್ರದೇಶಗಳಿಂದ ವಲಸೆ ಕಾರ್ಮಿಕರು, ವಿವಿಧ ಕಂಪನಿಗಳ ಉದ್ಯೋಗಿಗಳು ವಾಪಸ್ ತಮ್ಮ ಊರುಗಳಿಗೆ ಆಗಮಿಸಿದ್ದರು. ಆದರೆ, ಉದ್ಯೋಗ ಹಾಗೂ ಯಾವುದೇ ಆದಾಯ ಇಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬಹುತೇಕರಿಗೆ ಉದ್ಯೋಗ ನೀಡುವ ಮೂಲಕ ನರೇಗಾ ನೆರವಾಗಿತ್ತು.
ಕೂಲಿ ದರ ಏರಿಕೆ: ಕೇಂದ್ರ ಸರ್ಕಾರವು ಹಳ್ಳಿಗಳಲ್ಲಿನ ನಿರುದ್ಯೋಗ ನಿವಾರಣೆ, ಗುಳೆ ತಪ್ಪಿಸಲು ಹಾಗೂ ಎಲ್ಲ ಭಾಗದಲ್ಲಿ ಕೆಲಸ ಕಲ್ಪಿಸಲು ಮಾನವ ದಿನಗಳನ್ನು ಹೆಚ್ಚು ಸೃಷ್ಟಿಸಿತ್ತಲ್ಲದೆ, ನರೇಗಾ ಕೂಲಿಯನ್ನು 275ರಿಂದ 289 ರೂ.ಗೆ ಹೆಚ್ಚಿಸಿತು. ಬದುಕು ಕಟ್ಟಿಕೊಳ್ಳಲು ನರೇಗಾ ಯೋಜನೆ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ನರೇಗಾದ ಈ ಸಾಧನೆ ಚಿರಸ್ಥಾಯಿಯಾಗಿರಲು ಸಾಕ್ಷೃಚಿತ್ರ ನಿರ್ಮಿಸಲಾಗುತ್ತಿದೆ.
ಬೆಳಗಾವಿಯಲ್ಲಿ ಶೇ.60 ಚಿತ್ರೀಕರಣ: ನರೇಗಾ ಯೋಜನೆ ಸಾಧನೆ ಕುರಿತು ಸಿದ್ಧಗೊಳ್ಳಲಿರುವ ಇನ್ನೂ ಹೆಸರಿಡದ ಸಾಕ್ಷೃಚಿತ್ರದ ಶೇ. 60ರಷ್ಟು ಭಾಗ ಬೆಳಗಾವಿ ಜಿಲ್ಲೆಯಲ್ಲಿ ಚಿತ್ರೀಕರಣ ಆಗಲಿದೆ. ಪ್ರಮುಖವಾಗಿ ಸವದತ್ತಿ, ಬೈಲಹೊಂಗಲ, ಬೆಳಗಾವಿ, ಹುಕ್ಕೇರಿ ಭಾಗಗಳಲ್ಲಿನ ಜಲಮೂಲಗಳ ಸಂರಕ್ಷಣೆ, ಅಂರ್ತಜಲ ವೃದ್ಧಿಗಾಗಿ ಕೈಗೊಂಡಿರುವ ಕೆರೆ-ಕಟ್ಟೆ ಅಭಿವೃದ್ಧಿ ಹಾಗೂ ಬದುಗಳ ನಿರ್ಮಾಣ ಸ್ಥಳಗಳು ಹಾಗೂ ಕೂಲಿ ಕಾರ್ಮಿಕರ ದಿನ ನಿತ್ಯದ ಕೆಲಸಗಳು ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ.
8.5 ಕೋಟಿ ಮಾನವ ದಿನ ಸೃಷ್ಟಿ: 2020-21ನೇ ಸಾಲಿನಲ್ಲಿ ರಾಜ್ಯದ 6,021 ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯಡಿ 8.5 ಕೋಟಿ ಮಾನವ ದಿನ ಸೃಷ್ಟಿಸಲಾಗಿತ್ತು. 2,340 ಕೆರೆ, 3,230 ಆಟದ ಮೈದಾನ, ಲಕ್ಷಾಂತರ ಕೃಷಿ ಹೊಂಡ, ಲಕ್ಷಕ್ಕೂ ಅಧಿಕ ಬಚ್ಚಲು ಗುಂಡಿ, ಸಾವಿರಾರು ಎಕರೆ ಕೃಷಿ ಜಮೀನಿನಲ್ಲಿ ಬದುಗಳ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಸರ್ಕಾರಿ ಆಸ್ತಿಗಳಿಗೆ ಬೇಲಿ ಹಾಕುವ ಮೂಲಕ ಸಂರಕ್ಷಣೆಯನ್ನೂ ಮಾಡಲಾಗಿದೆ. ಪ್ರಮುಖವಾಗಿ ಉದ್ಯೋಗ ಹುಡುಕಿಕೊಂಡು ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಡೆಯುವಲ್ಲಿ ನರೇಗಾ ಯೋಜನೆ ಯಶ ಕಂಡಿದೆ.
ನರೇಗಾ ಯೋಜನೆಯ ಸಾಧನೆ, ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡ ಕಾಮಗಾರಿಗಳಿಂದ ಆಗಿರುವ ಲಾಭ, ಜನರಿಗೆ ದೊರೆತ ಉದ್ಯೋಗಾವಕಾಶಗಳ ಕುರಿತು ಸಾಕ್ಷ್ಯಚಿತ್ರ ಮಾಹಿತಿ ನೀಡಲಿದೆ. ಬೈಲಹೊಂಗಲ, ಸವದತ್ತಿ ಭಾಗಗಳಲ್ಲಿ ಚಿತ್ರೀಕರಣಕ್ಕೆ ಸ್ಥಳ ಪರಿಶೀಲಿಸಲಾಗಿದೆ. 2 ತಿಂಗಳ ಒಳಗೆ ಚಿರೀಕರಣ ಆರಂಭಗೊಳ್ಳಲಿದೆ.| ದರ್ಶನ ಎಚ್.ವಿ. ಜಿಪಂ ಸಿಇಒ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ