ಸಹಕಾರಿ ವಲಯದಿಂದ ರಿಯಲ್ ಎಸ್ಟೇಟ್ ಕೆಲಸ

19 KRN-1
ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಎಂ.ಟಿ.ಅಣ್ಣೇಗೌಡ ಉದ್ಘಾಟಿಸಿದರು. ಕೆ.ಎನ್.ಬಸಂತ್, ಎಚ್.ಸುಬ್ಬಯ್ಯ, ಎ.ಟಿ.ಸೋಮಶೇಖರ್, ಕೋಳಿಪ್ರಕಾಶ್, ಟಿ.ರಾಮೇಗೌಡ ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ರೈತರು ಮತ್ತು ಬಡಜನರಿಗೆ ಅನುಕೂಲ ಕಲ್ಪಿಸುತ್ತಿದ್ದ ಸಹಕಾರಿ ವಲಯ ಇಂದು ರಿಯಲ್ ಎಸ್ಟೇಟ್ ಉದ್ಯಮವಾಗಿ ಮಾರ್ಪಾಡಾಗಿದೆ. ಇದರಿಂದ ರೈತರು ಸೇರಿದಂತೆ ಬಡವರಿಗೆ ಉಪಯೋಗವಿಲ್ಲ ಎಂದು ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ದೇಶದ ಮೊದಲ ಪ್ರಧಾನಿ ಜವಹಾರ್‌ಲಾಲ್ ನೆಹರು ಅವರು ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು, ರಾಜಕೀಯಕ್ಕೆ ಸಹಕಾರ ಬೇಕು ಎಂದು ಹೇಳಿದ ಮಾತನ್ನು ಅನುಸರಿಸುತ್ತಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಸಹಕಾರ ಸಂಘಗಳ ಮೂಲಕ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಸಹಕಾರ ಸಂಘಗಳಿಂದ ನಿವೇಶನ ನೀಡುವ ಭರವಸೆ ನೀಡಿ ರಿಯಲ್‌ಎಸ್ಟೇಟ್ ಮಾಡುವವರು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು.
ಸಹಕಾರ ಸಂಘಗಳು ಸವಲತ್ತುಗಳನ್ನು ಸಕಾಲದಲ್ಲಿ ನೀಡಬೇಕು. ಸಂಘಗಳ ಸಿಇಒಗಳು ಹಣದ ಆಸೆಗಾಗಿ ಮೋಸ ಮಾಡಬಾರದು. ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯನ್ನು ಸರ್ಕಾರ ಮತ್ತೆ ಜಾರಿಗೆ ತಂದಿದ್ದು, ಸದಸ್ಯರು ನೋಂದಣಿ ಮಾಡಬೇಕು ಎಂದರು.
ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಎಂ.ಟಿ.ಅಣ್ಣೇಗೌಡ, ಎಂಡಿಸಿಸಿ ಜಿಲ್ಲಾ ಬ್ಯಾಂಕ್ ಉಪಾಧ್ಯಕ್ಷ ಎಚ್.ಸುಬ್ಬಯ್ಯ, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಕುಕ್ಕೂಟ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಸಿದ್ದೇಗೌಡ, ಸಹಕಾರ ಒಕ್ಕೂಟದ ನಿರ್ದೇಶಕ ಟಿ.ರಾಮೇಗೌಡ ಮಾತನಾಡಿದರು. ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್, ಹಾಪ್‌ಕಾಮ್ಸ್ ನಿರ್ದೇಶಕರಾದ ಕೆ.ಸುಜಾತಾ, ಎಚ್.ಎಸ್. ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ಮಹೇಶ್, ಸಹಕಾರ ಸಂಘಗಳ ಉಪನಿಬಂಧಕ ಜಿ.ಆರ್.ವಿಜಯಕುಮಾರ್, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸಣ್ಣತಮ್ಮೇಗೌಡ, ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಾದ ಸುಧೀರ್, ಸತೀಶ್, ನವನಗರ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದ ವ್ಯವಸ್ಥಾಪಕ ರೇಣುಕಪ್ರಸನ್ನ, ಟಿಎಪಿಸಿಎಂಎಸ್ ಕಾರ್ಯದರ್ಶಿ ಪುಟ್ಟಸ್ವಾಮಿ, ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net