

ಅರಸೀಕೆರೆ : ಆಸಕ್ತಿ ಮತ್ತು ಸಂತಸದಾಯಕ ವಾತಾವರಣ ಕಲಿಕೆಗೆ ಪೂರಕವಾಗಲಿದೆ ಎಂದು ಆಲೂರಿನ ಉಪನ್ಯಾಸಕ ರೋಹಿತ್‌ಅಗಸರಹಳ್ಳಿ ಹೇಳಿದರು.
ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ವಿವೇಕಾನಂದ ಬಿ.ಇಡಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಚಕೋರ-2ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಹಿತ್ಯದ ಹೊಸ ಓದು ಮತ್ತು ಬೋಧಕನ ಮುಂದಿರುವ ಸವಾಲುಗಳ ಕುರಿತು ಮಾತನಾಡಿದರು.
ಅರಳುವ ಮನಸ್ಥಿತಿಯ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡು ವಿಷಯ ಮನದಟ್ಟು ಮಾಡಿದರೆ ಬಹಳ ಕಾಲ ನೆನಪಿನಂಗಳದಲ್ಲಿ ಉಳಿಯಲಿದೆ. ಬದಲಾದ ವಿದ್ಯಮಾನದಲ್ಲಿ ಶಿಕ್ಷೆ ನೀಡಿ ಪಾಠ ಹೇಳುವ ಕ್ರಮ ಕಾನೂನಿನ ವಿರುದ್ಧವಾಗಿದೆ. ಕೃತಯುಗ, ತ್ರೇತಾಯುಗ, ದ್ವಾಪರಾಯುಗದಲಿ ದಂಡಿಸಿ, ಬೈದು ವಿದ್ಯೆ ಕಲಿಸಿದರೆ ಮಹಾ ಪ್ರಸಾದವೆಂದು ಸ್ವೀಕರಿಸಿ ಕಲಿಯುವ ವಿದ್ಯಾರ್ಥಿಗಳಿದ್ದರು. ಆದರೆ ಕಲಿಯುಗದಲ್ಲಿ ಗುರುವೇ ಶಿಷ್ಯನಿಗೆ ವಂದಿಸಿ ಪಾಠ, ಪ್ರವಚನ ಹೇಳಬೇಕು ಎನ್ನುವ ವಚನಕಾರ ಅಲ್ಲಮಪ್ರಭುವಿನ ವಚನ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
ಕಲಿಯಲು ಆಸಕ್ತಿ ಹಾಗೂ ಸಂತಸದಾಯಕ ಸನ್ನಿವೇಶ ಇರಬೇಕು ಎಂದು ಪಾಶ್ಚಾತ್ಯ ವಿದ್ವಾಂಸರು ಕೂಡ ಹೇಳಿದ್ದಾರೆ. ಪ್ರಶಿಕ್ಷಣಾರ್ಥಿಗಳು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆ ಹೊತ್ತಿದ್ದೀರಿ. ಸಾಹಿತ್ಯದ ಹೊಸ ಓದು ಮತ್ತು ಬೋಧಕನ ಮುಂದಿರುವ ಸವಾಲುಗಳನ್ನು ಅರಿತು ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ, ಸಾಹಿತ್ಯದ ಮಹತ್ವ ಪಸರಿಸುವ ಸಂಕಲ್ಪ ನಿಮ್ಮದಾಗಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್. ಎಲ್.ಮಲ್ಲೇಶಗೌಡ ಮಾತನಾಡಿ, ಸಾಹಿತ್ಯ ಅಕಾಡೆಮಿ ಶಾಲಾ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ದಿಟ್ಟ ಹೆಜ್ಜೆ ಇರಿಸಿದೆ. ಇಂತಹ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದರು.
ಹಿರಿಯ ಕವಯಿತ್ರಿ ಎಚ್.ಆರ್.ಸುಜಾತಾ, ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕುಡವಕ್ಕಲಗಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬೊಮ್ಮೇಗೌಡ ಮಾತನಾಡಿದರು. ಪ್ರಾಧ್ಯಾಪಕರಾದ ಬಸವರಾಜು, ಕಾಂತರಾಜು, ಎಫ್‌ಡಿಎ ಶಶಿಧರ್, ರೇಖಾ , ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಬಿಇಡಿ ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.