ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ

1414
Published on

ಬೆಳಗಾವಿ: ಕರೊನಾ ಸಂಕಷ್ಟ ಸಮಯದಲ್ಲಿ ಖಾಸಗಿ ಶಾಲೆ ತೊರೆದು, ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿದ್ದ ಜ್ಞಾನ ದೇಗುಲಗಳಿಗೂ ಮರುಜೀವ ಸಿಕ್ಕಂತಾಗಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಶಿಕ್ಷಕರೇ ಇಲ್ಲ.

ಬೆಳಗಾವಿ ಜಿಲ್ಲೆಯೊಂದರಲ್ಲೇ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 3,867 ಶಿಕ್ಷಕರ ಹುದ್ದೆ ಖಾಲಿ ಇದ್ದು, ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗಡಿಭಾಗದ ತೋಟಪಟ್ಟಿಗಳು ಹಾಗೂ ಕಾಡಂಚಿನ ಗ್ರಾಮಗಳ ಶಾಲೆಗಳ ಮಕ್ಕಳು, ಶಿಕ್ಷಕರ ಕೊರತೆಯಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ.

ನೀಗದ ತೊಂದರೆ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1,388, ಪ್ರೌಢಶಾಲೆಗಳಲ್ಲಿ 184 ಸೇರಿ 1,572 ಶಿಕ್ಷಕರ ಹುದ್ದೆ ಖಾಲಿ ಇವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 1,935, ಪ್ರೌಢಶಾಲೆಗಳಲ್ಲಿ 360 ಸೇರಿ 2,295 ಶಿಕ್ಷಕರ ಹುದ್ದೆ ಭರ್ತಿಯಾಗಬೇಕಿದೆ. ಈ ಪೈಕಿ ಸರ್ಕಾರ ಬೆಳಗಾವಿಯಲ್ಲಿ 888, ಚಿಕ್ಕೋಡಿಯಲ್ಲಿ 1,295 ಸೇರಿ 2,183 ಅತಿಥಿ ಶಿಕ್ಷಕರನ್ನು ನೇಮಿಸಿ ಕೈತೊಳೆದುಕೊಂಡಿದೆ. ಆದರೆ, ಅತಿಥಿ ಶಿಕ್ಷಕರ ನೇಮಕಾತಿ ನಂತರವೂ ಸಮಸ್ಯೆ ಬಗೆಹರಿದಿಲ್ಲ. ಮಕ್ಕಳ ಪರದಾಟ ತಪ್ಪಿಲ್ಲ.

ತಜ್ಞರ ಸಲಹೆ: ಕರೊನಾ ಹಾವಳಿ ತಗ್ಗಿದ್ದರಿಂದ 1-10ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿವೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಚಾಲನೆ ಸಿಕ್ಕಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಸರ್ಕಾರವೂ ನಾನಾ ಮಾಹಿತಿ ಕಲೆಹಾಕುತ್ತಿದೆ. ಹಲವು ಯೋಜನೆ ಜಾರಿಗೊಳಿಸುತ್ತಿದೆ. ಆದರೆ, ಶಿಕ್ಷಕರ ಅಭಾವದಿಂದ ಎಲ್ಲ ಕೆಲಸವನ್ನೂ ಸಕಾಲಕ್ಕೆ ಮಾಡಲಾಗುತ್ತಿಲ್ಲ.

ಮಕ್ಕಳ ಕಲಿಕೆಯೆಡೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಳ್ಳುತ್ತಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಖಾಲಿ ಇರುವ ಬೋಧಕ ಹುದ್ದೆ ಭರ್ತಿಗೊಳಿಸದಿದ್ದರೆ, ಮುಂದಿನ ವರ್ಷ ಮತ್ತೆ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದರೂ ಅಚ್ಚರಿ ಇಲ್ಲ ಎಂದು ಶಿಕ್ಷಣ ತಜ್ಞರು ತಿಳಿಸಿದ್ದಾರೆ.

ಮೂಡಲಗಿ ವಲಯದಲ್ಲೇ ಅಧಿಕ ಸಮಸ್ಯೆ: ಜಿಲ್ಲೆಯಲ್ಲಿ 15 ಶೈಕ್ಷಣಿಕ ವಲಯಗಳಿವೆ. ಈ ಪೈಕಿ ಮೂಡಲಗಿ ವಲಯದ ಪ್ರಾಥಮಿಕ ಶಾಲೆಗಳಲ್ಲಿ 405, ಪ್ರೌಢಶಾಲೆಗಳಲ್ಲಿ 115 ಪ್ರೌಢ ಸೇರಿ 518 ಹುದ್ದೆ ಖಾಲಿ ಇವೆ. ಯಾದವಾಡ, ಬೆಟಗೇರಿ, ಕುಲಗೋಡ, ಅವರಾದಿ, ಢವಳೇಶ್ವರ, ರಡ್ಡೇರಹಟ್ಟಿ, ಮಣ್ಣಿಕೇರಿ, ಕಳ್ಳಿಗುದ್ದಿ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಥಣಿ ವಲಯದ ಅನಂತಪುರ, ನಂದೇಶ್ವರ, ಡೊಂಗ್ರೆವಾಡಿ ಮತ್ತಿತರ ಗ್ರಾಮಗಳ ತೋಟಪಟ್ಟಿಗಳಲ್ಲಿ 20 ಶಾಲೆಗಳಿವೆ.

ಅಲ್ಲಿ ಕೆಲಸ ಮಾಡುತ್ತಿದ್ದ ಹಲವರು ಬೇರೆಡೆ ವರ್ಗಾವಣೆಗೊಂಡಿದ್ದಾರೆ. ಆದರೆ, ಅಸಮರ್ಪಕ ಬಸ್ ಸೌಲಭ್ಯ ಮತ್ತಿತರ ಕಾರಣಗಳಿಂದ ತೋಟಪಟ್ಟಿ ಶಾಲೆಗಳಿಗೆ ಶಿಕ್ಷಕರು ಹೋಗಲು ಮನಸ್ಸು ಮಾಡುತ್ತಿಲ್ಲ. ಅತಿಥಿ ಶಿಕ್ಷಕರ ಸೇವೆಯನ್ನೇ ಗರಿಷ್ಠವಾಗಿ ಬಳಸಿಕೊಂಡು, ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕಾಡಂಚಿನ ಗ್ರಾಮಗಳಲ್ಲಿ ಕನ್ನಡ ಕಲಿಕೆಗೆ ತೊಂದರೆ: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ಚಿಕಲೆ, ಜಾಂಬೋಟಿ, ಗವ್ವಾಳಿ, ಹುಳಂದ, ಮಾನ, ಶಿವಠಾಣ, ನೇರಸಾ ಮತ್ತಿತರ ಗ್ರಾಮಗಳ ಸರ್ಕಾರಿ ಮರಾಠಿ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರ ಕೊರತೆಯಿದೆ. ಹಾಗಾಗಿ ತವರಿನಲ್ಲೇ ಕನ್ನಡ ಕಲಿಕೆಗೆ ಪೆಟ್ಟು ಬೀಳುತ್ತಿದೆ. ನಗರ, ಪಟ್ಟಣದ ಶಾಲೆಗಳಿಗೆ ಹೋಲಿಸಿದರೆ, ಗ್ರಾಮೀಣ ಶಾಲೆಗಳಲ್ಲೇ ಶಿಕ್ಷಕರ ಕೊರತೆ ಅಧಿಕವಾಗಿದೆ. ಬೆಳಗಾವಿ ಡಿಡಿಪಿಐ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವರ್ಗಾವಣೆ (ಕಡ್ಡಾಯ) ಕೌನ್ಸೆಲಿಂಗ್ ಪ್ರಕ್ರಿಯೆ ವೇಳೆ, ಗ್ರಾಮೀಣ ಭಾಗದ 101 ಶಿಕ್ಷಕರು ನಗರದ ಶಾಲೆಗಳಿಗೆ ವರ್ಗಾವಣೆಗೊಂಡಿದ್ದಾರೆ. ಹಾಗಾಗಿ ಹಳ್ಳಿ ಶಾಲೆಗಳಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗಿದೆ.

| ಇಮಾಮಹುಸೇನ್ ಗೂಡುನವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net