

ಎನ್.ಆರ್.ಪುರ: ನಾನು ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿದ್ದೇನೆ. ಆದ್ದರಿಂದ ಪಾಲಕರು ಸರ್ಕಾರಿ ಶಾಲೆಗಳ ಮೇಲಿನ ಕೀಳರಿಮೆ ಬಿಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.
ಶನಿವಾರ ಮುತ್ತಿನಕೊಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿ, ನಾನು ಮಡಬೂರಿನ ಸರ್ಕಾರಿ ಶಾಲೆಯಲ್ಲಿ ಓದಿ, ಈ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದೆ. ಸರ್ಕಾರಿ ಶಾಲೆ ಮಕ್ಕಳಲ್ಲಿ ಆತ್ಮಸ್ಥೆರ್ಯ ತುಂಬ ಇರುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸರ್ಕಾರಿ ಶಾಲೆ ಮೇಲಿನ ಕೀಳರಿಮೆಯನ್ನು ಜನರು ತೊಡೆದು ಹಾಕಬೇಕು. ನನ್ನೂರಿನ ಶಾಲೆ ಹಾಗೂ ನನ್ನನ್ನು ನೋಡಿ ಸರ್ಕಾರಿ ಶಾಲೆ ಮಕ್ಕಳಲ್ಲಿ ಆತ್ಮಸ್ಥೆರ್ಯ ಬೆಳೆಯಲಿ ಎಂಬ ಉದ್ದೇಶದಿಂದ ಬಂದಿದ್ದೇನೆ ಎಂದರು.
ಈ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಶಾಸಕರು ಗಮನಹರಿಸಬೇಕು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ಅಗಾಧ ಪ್ರತಿಭೆ ಇದೆ. ಅದನ್ನು ಹೊರ ಹಾಕಲು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು. ಈ ಶಾಲೆ ಮಕ್ಕಳು ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ್ದಾರೆ. ಅವರಿಗೆ ಸೂಕ್ತ ತರಬೇತುದಾರರ ಬೇಕಾಗಿದೆ ಎಂದು ತಿಳಿಸಿದರು.
ಡಯೆಟ್ ಉಪನ್ಯಾಸಕ ಎಸ್.ಸಿ.ಶಂಕರಪ್ಪ ಮಾತನಾಡಿ, ಶಾಲೆಯಲ್ಲಿ 124 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ಜತೆಗೆ ಶಿಸ್ತು ಕಲಿಸಲಾಗುತ್ತಿದೆ. ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ, ಪಾಲಕರ, ಸಾರ್ವಜನಿಕರ ಸಹಕಾರದಿಂದ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.
ವಾರ್ಷಿಕೋತ್ಸವ ಅಂಗವಾಗಿ ಮಕ್ಕಳಿಗೆ ನಡೆಸಿದ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಲ್.ಮನೋಹರ್, ಡಾ. ಕೆ.ಪಿ.ಅಂಶುಮಂತ್, ಮುತ್ತಿನಕೊಪ್ಪ ಗ್ರಾಪಂ ಉಪಾಧ್ಯಕ್ಷ ಎಂ.ಎಸ್.ನರೇಂದ್ರ, ಸದಸ್ಯರಾದ ಮಹಮ್ಮದ್‌ಯಾಜ್, ಪುಷ್ಪಾ, ಲಿಸ್ಸಿಸೆಬಾಸ್ಟಿನ್, ಕಣಿವೆ ವಿನಯ್, ಮುತ್ತಿನಕೊಪ್ಪ ಪಿಯು ಕಾಲೇಜಿನ ಪ್ರಾಚಾರ್ಯ ಶಶಿಧರ, ಸಿಆರ್‌ಪಿ ಗೀತಾ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹರ್ಷ, ಮುಖ್ಯಶಿಕ್ಷಕಿ ಗೀತಾ ಇತರರಿದ್ದರು.