

ನಂಜನಗೂಡು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ, ಸಂಸ್ಥೆಗಳು ಕೈ ಜೋಡಿಸಿದರೆ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ವ್ಯವಸ್ಥಾಪಕ ಅಫ್ರುಲ್ ಪಾಷ ಹೇಳಿದರು.
ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಸುತ್ತೂರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ತಾಲೂಕಿನ ಸುತ್ತೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ, ಮಳೆ ನೀರು ಕೊಯ್ಲು ಮತ್ತು ಮಳೆ ನೀರು ಸಂಗ್ರಹ ಘಟಕಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಸಲುವಾಗಿ ನಮ್ಮ ಸಂಸ್ಥೆ ಮೂಲಕ ಮೈಸೂರು ಜಿಲ್ಲೆಯ 10 ಗ್ರಾ.ಪಂ ವ್ಯಾಪ್ತಿಗೆ ಸೇರಿದ 90 ಅಂಗನವಾಡಿ ಕೇಂದ್ರ ಹಾಗೂ 65 ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಸಂಗ್ರಹಣಾ ಘಟಕ, ಇಂಗುಗುಂಡಿ ಹಾಗೂ ಶೌಚಗೃಹ ನಿರ್ಮಾಣವನ್ನು ಗ್ರಾಮ ಪಂಚಾಯಿತಿ ಸಹಕಾರದಿಂದ ಹಮ್ಮಿಕೊಂಡಿದ್ದೇವೆ ಎಂದರು.
ಸುತ್ತೂರು ಗ್ರಾಪಂ ಅಧ್ಯಕ್ಷೆ ಅಂಬಿಕಾ ಮಾದಪ್ಪ, ಮಾಜಿ ಅಧ್ಯಕ್ಷ ಪಿ.ಸೋಮಣ್ಣ, ಪಿಡಿಒ ಮಹದೇವಸ್ವಾಮಿ, ಶಾಲಾ ಮುಖ್ಯ ಶಿಕ್ಷಕ ನಾಗರಾಜು, ಸಿಆರ್‌ಪಿ ಉಮ್ಮೆಅಸ್ಮಾ, ಎಸ್‌ಡಿಎಂಸಿ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ರವಿ, ಇಂಜಿನಿಯರ್ ತಾರೆಸ್, ಗುತ್ತಿಗೆದಾರ ನಗರ್ಲೆ ವಾಸಿಂ, ಹರೀಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.