

ಬೆಂಗಳೂರು:
ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸೌರ ವಿದ್ಯುತ್ ಘಟಕ ಅಳವಡಿಸುವ ಆರೋಗ್ಯ ಇಲಾಖೆಯ ‘‘ಸೌರ ಸ್ವಾಸ್ಥ್ಯ ಯೋಜನೆ’ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ನಗರದಲ್ಲಿ ಚಾಲನೆ ನೀಡಿದರು.
ಸೆಲ್ಕೊ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಯೋಜನೆಯಡಿ 2026ರ ವೇಳೆಗೆ ರಾಜ್ಯದ 5 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಘಟಕ ಅಳವಡಿಸುವ ಗುರಿ ಹೊಂದಿರುವುದಾಗಿ ಸಚಿವರು ತಿಳಿಸಿದರು.
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿ 120 ಕೋಟಿ ರೂ. ವೆಚ್ಚದಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲಾಗುತ್ತಿದ್ದು, ಈ ಘಟಕಗಳ ಅಳವಡಿಕೆಯಿಂದ ತಿಂಗಳಿಗೆ 5 ಲಕ್ಷ ಯೂನಿಟ್ ವಿದ್ಯುತ್, ಪ್ರತಿ ತಿಂಗಳು 50 ಲಕ್ಷ ರೂ. ವಿದ್ಯುತ್ ಬಿಲ್ ಉಳಿತಾಯವಾಗಲಿದೆ ಎಂದು ಹೇಳಿದರು.
ಈಗಾಗಲೇ ಪ್ರಥಮ ಹಂತದಲ್ಲಿ 1,152ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಘಟಕಗಳನ್ನು ಒದಗಿಸಲಾಗಿದ್ದು, ರಾಯಚೂರಿನ ಎಲ್ಲ ಆರೋಗ್ಯ ಕೇಂದ್ರಗಳು ಸೌರ ವಿದ್ಯುತ್ ಘಟಕಗಳನ್ನು ಹೊಂದಿವೆ. ಇದರಿಂದ ಅಲ್ಲಿನ ಆರೋಗ್ಯ ಕೇಂದ್ರಗಳ ವಿದ್ಯುತ್ ಬಿಲ್‌ಗಳಲ್ಲಿ ಶೇ.70 ಉಳಿತಾಯವಾಗುತ್ತಿದೆ. ಈಗಾಗಲೇ ಸುಮಾರು 3 ಮೆಗಾ ವಾಟ್ ಸೌರ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕ್ರಮದಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ. ರಿಮೋಟ್ ಮಾನಿಟರಿಂಗ್ ಸಿಸ್ಟಮ್ ಮೂಲಕ ನಿರಂತರ ನಿಗಾ ಹಾಗೂ ಸೌರ ಇ-ಮಿತ್ರಾ ಮೊಬೈಲ್ ಆ್ಯಪ್ ಮೂಲಕ ಸೋಲಾರ್ ಸಾಧನಗಳ ನಿರ್ವಹಣೆ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬ್ಯಾಟರಿ ಆಧಾರಿತ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ವಾರದ ಎಲ್ಲ ದಿನ 24 ಗಂಟೆ ವಿದ್ಯುತ್ ದೊರೆಯಲಿದೆ. ಸುಸ್ಥಿರ ಶಕ್ತಿಯು ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲಿದೆ ಎಂದರು.
ಸೆಲ್ಕೊ ಫೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಹಂದೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ನಿರ್ದೇಶಕ ನವೀನ್ ಭಟ್ ಇತರರು ಇದ್ದರು.