ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ಕೋಲಾರ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿ/ ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಸರ್ಕಾರಿ ಜಮೀನು ಪತ್ತೆ ಹಚ್ಚಿದ ಅಧಿಕಾರಿಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನು ಮತ್ತು ಆಸ್ತಿಗಳನ್ನು ಸಂರಕ್ಷಣೆ ಮಾಡುವಲ್ಲಿ ಜಿಲ್ಲೆ ಯಶಸ್ಸು ಕಂಡಿದ್ದು, ರಾಜ್ಯದಲ್ಲಿಯೇ ಮುಂಚೂಣಿ ಜಿಲ್ಲೆಯಾಗಿದೆ.

ರಾಜ್ಯಾದ್ಯಂತ ಇರುವ ಸರ್ಕಾರಿ ಜಮೀನುಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಸಮಸ್ಯೆ ಮತ್ತು ಇವುಗಳನ್ನು ತೆರವುಗೊಳಿಸಲು ನಡೆಸಬೇಕಾದ ಹಲವು ವರ್ಷಗಳ ಕಾನೂನು ಹೋರಾಟಗಳು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಸರ್ಕಾರಿ ಆಸ್ತಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಅವು ಖಾಸಗಿಯವರ ಪಾಲಾಗದಂತೆ ರಕ್ಷಿಸಿ, ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲ್ಯಾಂಡ್ ಬೀಟ್ ಆಪ್ ಬಳಸಿಕೊಂಡು, ವಿವಿಧ ಜಮೀನುಗಳಲ್ಲಿರುವ ಸರ್ಕಾರಿ ಭೂಮಿಯನ್ನು ಜಿಯೋ ಫೆನ್ಸಿಂಗ್ ಮಾಡಿ, ರಕ್ಷಣೆ ಮಾಡುವ ಕಾರ್ಯದಲ್ಲಿ ಕೋಲಾರ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ.

ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳು ಇರುವ ಒಟ್ಟು ೩೪೩೭೫ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಪೈಕಿ ೨೭೪೫೧ ಸ್ಥಳಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ, ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಈ ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಇದು ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯಾಗಿದೆ. ಈ ಜಮೀನುಗಳಲ್ಲಿರುವ ಸರ್ಕಾರಿ ಆಸ್ತಿಗಳ ಬಗ್ಗೆ ಸಂಬ೦ಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ಲ್ಯಾಂಡ್ ಬಿಟ್ ಆಪ್ ಮೂಲಕ ವರದಿ ನೀಡಿದ್ದು, ಆ ವರದಿಯನ್ನು ಸಂಬ೦ಧಪಟ್ಟ ತಾಲೂಕಿನ ತಹಶೀಲ್ದಾರ್‌ಗಳು ಅಂತಿಮಗೊಳಿಸುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ ೨೭೪೫೧ ಸರ್ಕಾರಿ ಆಸ್ತಿಗಳಿಗೆ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯ ಈ ಸರ್ಕಾರಿ ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ತಂತ್ರಾAಶದಲ್ಲಿ ಅಳವಡಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಕೋಲಾರ ತಾಲೂಕಿನಲ್ಲಿನ ೮೯೨೦ ಸರ್ಕಾರಿ ಆಸ್ತಿಗಳಲ್ಲಿ , ೭೦೬೭ ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಕಾರ್ಯ ಮಾಡಲು ಸ್ಥಳ ಭೇಟಿ ನಡೆಸಿ ವರದಿ ನೀಡಿದ್ದು, ಶೇ.೮೫.೭೨ ಆಸ್ತಿಗಳಿಗೆ ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ.

ಬಂಗಾರಪೇಟೆ ತಾಲೂಕಿನ ೩೩೨೦ ಸರ್ಕಾರಿ ಆಸ್ತಿಗಳಲ್ಲಿ ೨೮೩೫ ಆಸ್ತಿಗಳಿಗೆ, ಕೆ ಜಿ ಎಫ್ ತಾಲೂಕಿನ ೨೮೯೫ ಆಸ್ತಿಗಳಲ್ಲಿ ೨೪೨೧ ಆಸ್ತಿಗಳಿಗೆ, ಮುಳಬಾಗಿಲು ತಾಲೂಕಿನ ೭೨೯೪ ಆಸ್ತಿಗಳಲ್ಲಿ ೫೮೮೩ ಆಸ್ತಿಗಳಿಗೆ, ಶ್ರೀನಿವಾಸಪುರ ತಾಲೂಕಿನ ೬೩೯೪ ಆಸ್ತಿಗಳಲ್ಲಿ ೫೩೯೪ ಆಸ್ತಿಗಳಿಗೆ ಹಾಗೂ ಮಾಲೂರು ತಾಲೂಕಿನ ೫೫೫೨ ಆಸ್ತಿಗಳಲ್ಲಿ ೪೬೦೨ ಆಸ್ತಿಗಳಿಗೆ, ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ.

ಈ ಲ್ಯಾಂಡ್ ಬೀಟ್ ಆಪ್‌ನಲ್ಲಿ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳಾದ ಗೋಮಾಳ, ಹುಲ್ಲು ಬನ್ನಿ ಖರಾಬು, ಸರ್ಕಾರಿ ಫಡಾ, ಸರ್ಕಾರಿ ಖರಾಬು, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿ ದಾರಿ, ಗುಂಡು ತೋಪು ಇತ್ಯಾದಿ ಹಾಗೂ ಸರ್ಕಾರಿ ಕೆರೆ ಮತ್ತು ಸರ್ಕಾರಿ ಸ್ಮಶಾನಗಳನ್ನು ಸಂಬ೦ಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು ಲ್ಯಾಂಡ್ ಬೀಟ್ ತಂತ್ರಾ೦ಶದಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ಮಾಡಿದ್ದಾರೆ.

ಸರ್ಕಾರಿ ಜಮೀನುಗಳ ಪೈಕಿ ಅರಣ್ಯ ಜಮೀನುಗಳು, ಇತರೆ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳು (ಭೂಸ್ವಾಧೀನ), ಶಾಲೆಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳಂತಹ ಇತರ ಇಲಾಖೆಗಳ ಜಮೀನುಗಳನ್ನು ಒಳಗೊಂಡಿದ್ದು, ಇಂತಹ ಜಮೀನುಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳಿಗೆ ಕಳುಹಿಸಲು ತಂತ್ರಾ೦ಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಹಾಗೂ ವಸತಿ ಯೋಜನೆಗಳ ಫಲಾನುಭವಿಗಳಿಗೆ ಸೇರಿದಂತೆ ಅಗತ್ಯವಿರುವವರಿಗೆ ಭೂಮಿಯನ್ನು ಮಂಜೂರು ಮಾಡಲು ಸರ್ಕಾರಿ ಭೂಮಿಯ ಕೊರತೆಯಿದೆ. ಅಲ್ಲದೇ ಈಗಾಗಲೇ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಪ್ರಕ್ರಿಯೆಯು ದೀರ್ಘವಾಗಿರುವ ಜೊತೆಗೆ ಸಂಕೀರ್ಣವಾಗಿದೆ. ಸರ್ಕಾರದ ಸೂಚನೆಯಂತೆ ಲ್ಯಾಂಡ್ ಬೀಟ್ ಆಪ್ ಮೂಲಕ ಜಿಲ್ಲೆಯಲ್ಲಿನ ಸರ್ಕಾರಿ ಭೂಮಿಗಳನ್ನು ಗುರುತಿಸಿ, ಜಿಯೋ ಫೆನ್ಸಿಂಗ್ ಮಾಡುವ ಮೂಲಕ ಅವುಗಳನ್ನು ಸಂರಕ್ಷಿಸುವ ಕಾರ್ಯವನ್ನು ಸಮರೋಪಾದಿಯಲಿ ಕೈಗೊಂಡಿದ್ದು, ಈ ಕಾರ್ಯ ಪೂರ್ಣಗೊಂಡ ನಂತರ ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನ ನಿಖರ ಪ್ರಮಾಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇವುಗಳ ಅತಿಕ್ರಮಣವಾಗದಂತೆ ತಡೆಯುವ ಮೂಲಕ ಸಾರ್ವಜನಿಕ ಉದ್ದೇಶಗಳಿಗೆ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ದೊರೆಯಲಿದೆ.

ಚಿತ್ರ ೦೧ ಕೆ.ಎಲ್.ಆರ್. ೦೧ : ಕೋಲಾರ ತಾಲ್ಲೂಕು ಚುಂಚದೇನಹಳ್ಳಿ ಬಳಿ ಒತ್ತುವರಿ ಜಮೀನನ್ನು ತೆರವುಗೊಳಿಸಿ ಅರಣ್ಯ ಇಲಾಖೆಯವರು ಸ್ವಾಧೀನಪಡಿಸಿಕೊಂಡು ಸಸಿ ನಾಟಿ ಮಾಡುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net