ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ

Published on

ನಂಜನಗೂಡು: ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ದಶಕದ ಹಿಂದೆ ನಡೆದಿರುವ ಭೂ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹಗರಣದಲ್ಲಿ ಸರ್ಕಾರಿ ಅಧಿಕಾರಿಗಳೇ ಭಾಗಿಯಾಗಿದ್ದು ಸರ್ಕಾರದ ಬೊಕ್ಕಸಕ್ಕೆ ಇದರಿಂದ ಕೋಟ್ಯಂತರ ರೂ. ನಷ್ಟವಾಗಿರುವುದು ರುಜುವಾತಾಗಿದೆ.


ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಡಿ.26ರಂದು ಅಂದಿನ ಉಪವಿಭಾಗಾಧಿಕಾರಿ , ತಹಸೀಲ್ದಾರ್, ಶಿರಸ್ತೇದಾರ್ ಹಾಗೂ ಗ್ರಾಮಲೆಕ್ಕಿಗ ಸೇರಿದಂತೆ ಒಟ್ಟು 16 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.


ಏನಿದು ಪ್ರಕರಣ?: ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದ ಸರ್ವೇ ನಂ.390ರಿಂದ 422 ಹಾಗೂ 424ರ ಜಮೀನುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದರೂ ವಾರಸುದಾರರಲ್ಲದವರನ್ನು ಮಾಲೀಕರನ್ನಾಗಿಸಿ ಬಳಿಕ ಜಮೀನನ್ನು ಕೆಐಎಡಿಬಿಗೆ ಮಾರಾಟ ಮಾಡಲಾಗಿರುವುದು ಪತ್ತೆಯಾಗಿದೆ. ಹೀಗಾಗಿ ಹಾಲಿ ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ನೀಡಿರುವ ದೂರನ್ನಾಧರಿಸಿ ಭೂ ನ್ಯಾಯ ಮಂಡಳಿಯ ಹಿಂದಿನ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯ ಕಾರ್ಯದರ್ಶಿಯಾಗಿದ್ದ ಅಂದಿನ ನಂಜನಗೂಡು ತಹಸೀಲ್ದಾರ್ ನವೀನ್ ಜೋಸೆಫ್, ಆರ್‌ಆರ್‌ಟಿ ಶಿರಸ್ತೇದಾರ್ ರಮೇಶ್ ಬಾಬು, ರಾಜಸ್ವ ನಿರೀಕ್ಷಕ ಶಿವರಾಜು, ಗ್ರಾಮಲೆಕ್ಕಿಗ ವೆಂಕಟೇಶ್ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಭೂ ಮಂಜೂರಾತಿ ಮಾಡಿಸಿಕೊಂಡಿರುವ ಪಿ.ಕೃಷ್ಣಾನಂದ ಗಿರಿ ಗೋಸ್ವಾಮಿ, ಭೀಷ್ಮ ಪಿತಾಮಹ, ಸತ್ಯಭಾಮ, ಕುಲದೀಪ್ ಪ್ರಕಾಶ್,ಭೀಷ್ಮ್ಮ ಪಿತಾಮಹರ ಪುತ್ರಿಯರಾದ ಶೋಭಾದೇವಿ, ಹೇಮಲತಾ, ನಿಶಾ ಶರ್ಮ, ಅಂಜನಾ ಶರ್ಮ, ವಿಜಯಲಕ್ಷ್ಮೀ, ಪ್ರದೀಪ್ ಮತ್ತು ಸೋನು ಎಂಬುವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 406, 409, 420, 465, 468, 471, 120ಬಿ, 149 ಹಾಗೂ ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ 1964ರ ಸೆಕ್ಷನ್ 192 ರಡಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ನಡೆಸಲಿದ್ದಾರೆ.


ಹಿಮ್ಮಾವು ಗ್ರಾಮದಲ್ಲಿ 290ರಿಂದ 424ರವರೆಗೆ ಒಟ್ಟು 891 ಎಕರೆ ಜಮೀನು ಕೃಷ್ಣಾನಂದ ಗಿರಿ ಗೋಸ್ವಾಮಿ ಅವರ ಹೆಸರಿನಲ್ಲಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಕೃಷ್ಣಾನಂದ ಗಿರಿ ಗೋಸ್ವಾಮಿ ಸರ್ಕಾರಕ್ಕೆ ಘೋಷಣಾ ಪತ್ರ ಸಲ್ಲಿಸಿದ್ದರು. ಅದರನ್ವಯ ಅರ್ಜಿದಾರರ ಕುಟುಂಬಕ್ಕೆ ಜಮೀನು ನಿಗದಿಪಡಿಸುವ ಸಂಬಂಧ ಪ್ರಕರಣ ಭೂನ್ಯಾಯ ಮಂಡಳಿಯಲ್ಲಿ ದಾಖಲಾಗಿತ್ತು. ಭೂ ನ್ಯಾಯ ಮಂಡಳಿಯು 1993ರ ಆಗಸ್ಟ್ 6ರಂದು ಕೃಷ್ಣಾನಂದ ಗಿರಿ ಗೋಸ್ವಾಮಿ, ಭೀಷ್ಮಪಿತಾಮಹ, ಸತ್ಯಭಾಮ ಹಾಗೂ ಕುಲದೀಪ್ ಅವರಿಗೆ 10 ಯೂನಿಟ್‌ನಂತೆ ಒಟ್ಟು 40 ಯೂನಿಟ್ ಭೂಮಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದರಿಂದ ಬಳಿಕ ಹೈಕೋರ್ಟ್ ಭೂನ್ಯಾಯ ಮಂಡಳಿ ಆದೇಶವನ್ನು ರದ್ದುಪಡಿಸಿ ಮರು ವಿಚಾರಣೆ ನಡೆಸುವಂತೆ ಆದೇಶಿಸಿತ್ತು.


ನಂತರ ಭೂ ನ್ಯಾಯ ಮಂಡಳಿ ಮರು ವಿಚಾರಣೆ ನಡೆಸಿ 1999ರ ಮೇ 28ರಂದು ಹಿಂದಿನ ಆದೇಶವನ್ನೇ ಮತ್ತೆ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಹೈಕೋರ್ಟ್ 2006ರ ಡಿಸೆಂಬರ್ 18ರಂದು ರದ್ದುಪಡಿಸಿ ಮತ್ತೆ ಮರು ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಈ ಪ್ರಕರಣವನ್ನು ಮತ್ತೆ ವಿಚಾರಣೆಗೊಳಪಡಿಸಿದ ಭೂ ನ್ಯಾಯ ಮಂಡಳಿ ಈ ಹಿಂದೆ ತಾನು ನಿಗಪಡಿಸಿದ್ದ ನಾಲ್ವರ ಜತೆಗೆ ಹೆಚ್ಚುವರಿಯಾಗಿ ಭೀಷ್ಮ್ಮಪಿತಾಮಹ ಅವರ ಪುತ್ರಿಯರಾದ ಶೋಭಾದೇವಿ, ಹೇಮಲತಾ, ನಿಶಾ ಶರ್ಮ, ಅಂಜನಾ ಶರ್ಮ ಹಾಗೂ ವಿಜಯಲಕ್ಷ್ಮೀ ಅವರಿಗೆ 10 ಯೂನಿಟ್‌ನಂತೆ ಒಟ್ಟು 90 ಯೂನಿಟ್ ಭೂಮಿಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿತು.
ಈ ಭೂಮಿಯನ್ನು ವಶಪಡಿಸಿಕೊಂಡಿದ್ದ ಕೆಐಎಡಿಬಿ ಇವರೆಲ್ಲರಿಗೂ ಭೂ ಪರಿಹಾರ ನೀಡಿತ್ತು. 2015ರಲ್ಲಿ ಕೇಂದ್ರ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರು ಸಲ್ಲಿಕೆಯಾಗಿರುವ ದಾಖಲೆಗಳನ್ನು ಪರಿಶೀಲಿಸಿ ಅನರ್ಹ ವ್ಯಕ್ತಿಗಳಿಗೆ ಭೂ ಪರಿಹಾರ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸರ್ಕಾರಕ್ಕೆ 79.29 ಕೋಟಿ ರೂ. ನಷ್ಟವಾಗಿದೆ ಎಂಬುದು ಗಮನಕ್ಕೆ ಬಂದಿದ್ದು ಡಿ.7ರಂದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ಮೂಲಕ ತನಿಖೆಗೊಳಪಡಿಸಲು ಆದೇಶ ಹೊರಡಿಸಿತ್ತು.
ಹೀಗಾಗಿ ಪ್ರಕರಣದ ತನಿಖೆಗೆ ನೆರವಾಗುವ ಸಲುವಾಗಿ ಪೂರ್ವಭಾವಿಯಾಗಿ ಪೊಲೀಸ್ ದೂರು ದಾಖಲಿಸಲು ಸೂಚಿಸಿದ್ದು ಇದರನ್ವಯ ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net